ಪುತ್ತೂರು ತ್ರೈಮಾಸಿಕ ಕೆಡಿಪಿ ಸಭೆ-ಸಮಯ ಪ್ರಜ್ಞೆ ಪಾಲಿಸದ ಅಧಿಕಾರಿಗಳ ಬಗ್ಗೆ ಕ್ರಮ- ಶಾಸಕರ ಎಚ್ಚರಿಕೆ…..
ಪುತ್ತೂರು; ತ್ರೈಮಾಸಿಕ ಕೆಡಿಪಿ ಸಭೆಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರಬೇಕು. ಬದ್ಧತೆ ಮತ್ತು ಪ್ರಾಮಾಣಿಕೆಯಿಂದ ಕೆಲಸ ಮಾಡಬೇಕು. ಸಭೆಗೆ ಗೈರುಹಾಜರಾಗುವ, ಬೇಕಾಬಿಟ್ಟಿ ಬರುವ ಅಧಿಕಾರಿಗಳು ಇಲ್ಲಿ ಇರಬೇಕೋ ಬೇಡವೋ ಎಂಬುವುದನ್ನು ನಿರ್ಧರಿಸಬೇಕಾಗುತ್ತದೆ. ನಮ್ಮ ಪೆನ್ನಿಗೂ ಕೆಲಸ ಕೊಡಬೇಕಾಗುತ್ತದೆ. ಮುಂದಿನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ 10.30ಗೆ ಸಭಾಂಗಣದ ಬಾಗಿಲು ಬಂದ್ ಮಾಡಲಾಗುತ್ತದೆ. ಮತ್ತೆ ಬರುವ ಅಧಿಕಾರಿಗಳಿಗೆ ಸಭೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. ಅಧಿಕಾರಿಗಳು ಸಮಯ ಪರಿಪಾಲನೆ ಮಾಡಬೇಕು ಎಂದು ಶಾಸಕ ಸಂಜೀವ ಮಠಂದೂರು ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅವಿಭಜಿತ ಪುತ್ತೂರು ತಾಲೂಕಿನಲ್ಲಿರುವ 68 ಕಂದಾಯ ಗ್ರಾಮಗಳಲ್ಲಿ ಅಡಕೆ ಕೊಳೆರೋಗದ ಸಮೀಕ್ಷೆಯನ್ನು ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಆಶ್ರಯದಲ್ಲಿ ತಕ್ಷಣ ಸರ್ವೆ ಕಾರ್ಯ ನಡೆಸಬೇಕು ಎಂದು ಶಾಸಕ ಸಂಜೀವ ಮಠಂದೂರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಳೆದ ಬಾರಿ ಕೊಳೆರೋಗದಿಂದ ಅಡಕೆ ಬೆಳೆಯುವ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ. 8 ಸಾವಿರಕ್ಕೂ ಅಧಿಕ ರೈತರು ಅರ್ಜಿ ಸಲ್ಲಿಸಿದ್ದಾರೆ, ಆದರೆ ಅವರಲ್ಲಿ ಸುಮಾರು 1500 ಮಂದಿ ರೈತರಿಗೆ ಇನ್ನೂ ಕೊಳೆರೋಗ ಪರಿಹಾರ ಸಿಕ್ಕಿಲ್ಲ. ಯಾವುದೇ ನೆಪ ಹೇಳದೆ ಈ ಎಲ್ಲಾ ರೈತರಿಗೂ ಪರಿಹಾರ ಹಣ ಸಿಗಬೇಕು. ರೈತ ಎಂಬುವುದು ಒಂದೇ ಜಾತಿ. ಯಾವುದೇ ರೈತನಿಗೂ ಅನ್ಯಾಯವಾಗಬಾರದು ಎಂದವರು ಇಲಾಖೆಗಳಿಗೆ ಎಚ್ಚರಿಕೆ ನೀಡಿದರು.
ಕಂದಾಯ ಇಲಾಖೆಯ ಗ್ರಾಮಮಟ್ಟದ ಅಧಿಕಾರಿಗಳು ಯಾವಾಗಲೂ `ನಾಟ್ ರೀಚೆಬಲ್’ ಆಗಿರುತ್ತಾರೆ. ಹೀಗೆ ಮುಂದುವರಿದರೆ ಅವರನ್ನು ಶಾಶ್ವತವಾಗಿ ನಾಟ್ರೀಚೆಬಲ್ ಮಾಡಬೇಕಾಗುತ್ತದೆ ಎಂದ ಅವರು ಪುತ್ತೂರು ಮತ್ತು ಕಡಬ ತಹಶೀಲ್ದಾರ್ ಅವರು ನಿಮ್ಮ ಇಲಾಖೆ ಅಧಿಕಾರಿಗಳ ಮೇಲೆ ಗಮನ ಹರಿಸಬೇಕು. ಭ್ರಷ್ಟಾಚಾರದಲ್ಲಿ ಭಾಗಿಯಾಗುವ ಕಂದಾಯ ಇಲಾಖೆ ಗ್ರಾಮಕರಣಿಕರು, ಕಂದಾಯ ನಿರೀಕ್ಷಕರ ಮೇಲೆ ಪೊಲೀಸ್ ಇಲಾಖೆಯ ಸುಮೊಟೊ ತರಹ ನೀವೇ ದೂರು ದಾಖಲಿಸಿ ಶಿಕ್ಷೆ ಕೊಡುವ ಕೆಲಸವಾಗಬೇಕು ಎಂದು ತಹಶೀಲ್ದಾರ್ ಗಳಿಗೆ ಸೂಚಿಸಿದರು.
ಪುತ್ತೂರು ತಾಲೂಕಿಗೆ 4 ಜಿಲ್ಲಾಪಂಚಾಯಿತಿ ರಸ್ತೆ ಕಾಮಗಾರಿಗಳಿಗೆ ರೂ.5.75 ಕೋಟಿ, 3 ರಾಜ್ಯ ಹೆದ್ದಾರಿ ಕಾಮಗಾರಿಗೆ ರೂ.7.20 ಕೋಟಿ ಹಾಗೂ ಉಪ್ಪಿನಂಗಡಿ ಪುತ್ತೂರು ರಸ್ತೆಯನ್ನು ಚತುತ್ಪಥ ಗೊಳಿಸಲು ರೂ 12 ಕೋಟಿ ಅನುದಾನ ಮಂಜೂರಾಗಿದೆ. ಉಪ್ಪಿನಂಗಡಿ ಪುತ್ತೂರು ರಸ್ತೆಯ ಕೆಮ್ಮಾಯಿಯಿಂದ 34 ನೆಕ್ಕಿಲಾಡಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕದ ತನಕ ಸುಮಾರು 7 ಕಿಮೀ ರಸ್ತೆಯನ್ನು ಚತುಷ್ಪಥಗೊಳಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಲೊಕೋಪಯೋಗಿ ಇಲಾಖೆ ಅಧಿಕಾರಿ ತಿಳಿಸಿದರು. ಈ ಕೆಲಸ ಆದಷ್ಟು ಬೇಗ ಪ್ರಾರಂಭವಾಗಬೇಕು. ಅದಕ್ಕೂ ಮೊದಲು ಈಗಾಗಲೇ ವಾಹನಸಂಚಾರಕ್ಕೆ ತೊಂದರೆಯಾಗುತ್ತಿರುವ ಉಪ್ಪಿನಂಗಡಿ ಪುತ್ತೂರು ರಸ್ತೆಯ ಕೆಲವು ಭಾಗಗಳಲ್ಲಿ ತೇಪೆ ಹಾಕಿ ಸುಗಮ ಸಂಚಾರಕ್ಕೆ ವ್ಯವಸ್ಥೆಯನ್ನು ತಕ್ಷಣ ಮಾಡಬೇಕು ಎಂದು ಶಾಸಕರು ಸೂಚಿಸಿದರು.
ವೇದಿಕೆಯಲ್ಲಿ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಉಪಾಧ್ಯಕ್ಷೆ ಲಲಿತಾ ಈಶ್ವರ್, ಸ್ಥಾಯಿಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ಪುತ್ತೂರು ತಹಶೀಲ್ದಾರ್ ಅನಂತಶಂಕರ ಹಾಗೂ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ಉಪಸ್ಥಿತರಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ಕಲಾಪ ನಿರ್ವಹಿಸಿದರು.