ಪುತ್ತೂರು ಸತ್ಯಸಾಯಿ ಮಂದಿರದಲ್ಲಿ ಉಚಿತ ಕಣ್ಣು ಚಿಕಿತ್ಸಾ ಶಿಬಿರ…..
ಪುತ್ತೂರು: ಸತ್ಯಸಾಯಿ ಸೇವಾ ಸಮಿತಿ ಹಾಗೂ ಪುತ್ತೂರು ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ದ.ಕ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಜಿಲ್ಲಾ ವೆನ್‍ಲಾಕ್ ಸಂಚಾರಿ ನೇತ್ರಾ ಚಿಕಿತ್ಸಾ ಘಟಕ ಮತ್ತು ಕೆಎಂಸಿ ಮಂಗಳೂರು ಆಶ್ರಯದಲ್ಲಿ ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ ಮಂಗಳವಾರ ಪುತ್ತೂರು ಸತ್ಯ ಸಾಯಿ ಮಂದಿರದಲ್ಲಿ ನಡೆಯಿತು.
ಸತ್ಯಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಪ್ರಸನ್ನ ಎನ್.ಭಟ್ ಶಿಬಿರ ಉದ್ಘಾಟಿಸಿದರು. ಮಂಗಳೂರು ವೆನ್‍ಲಾಕ್ ಆಸ್ಪತ್ರೆಯ ನೇತ್ರಾಧಿಕಾರಿ ಡಾ.ಶಾಂತರಾಜ್ ಕಣ್ಣಿನ ಚಿಕಿತ್ಸೆ ಮತ್ತು ಮುಂಜಾಗರೂಕತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಒಂದು ಬಾರಿ ಪ್ರಯೋಜನ ಪಡೆದವರು ಮತ್ತೆ ಶಿಬಿರದಲ್ಲಿ ಭಾಗವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಉಚಿತ ಶಿಬಿರವನ್ನು ಯಾರೂ ದುರುಪಯೋಗಪಡಿಸಿಕೊಳ್ಳಬಾರದು ಎಂದರು. ಡಾ.ಅವಿನಾಶ್ ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಡಾ.ಸತ್ಯ ಸುಂದರ ರಾವ್ ಸ್ವಾಗತಿಸಿದರು. ಮಧುಸೂದನ ವಂದಿಸಿದರು. ಪದ್ಮನಾಭ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ 297 ಮಂದಿ ಭಾಗವಹಿಸಿದ್ದು 213 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು. 12 ಮಂದಿಯನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಕಳುಹಿಸಿಕೊಡಲಾಯಿತು. ಕಣ್ಣಿನ ಚಿಕಿತ್ಸಾ ಶಿಬಿರಕ್ಕೆ ಸಾರ್ವಜನಿಕರಿಂದ ಬೇಡಿಕೆ ಹಿನ್ನಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಶಿಬಿರವನ್ನು ನಡೆಸಲಾಗುವುದು ಎಂದು ಸತ್ಯಸಾಯಿ ಮಂದಿರದ ಮುಖ್ಯಸ್ಥ ಪದ್ಮನಾಭ ನಾಯಕ್ ತಿಳಿಸಿದ್ದಾರೆ.