ಪೃಕೃತಿ ವಿಕೋಪದಿಂದ ಜಿಲ್ಲೆಯಲ್ಲಿ 710 ಮನೆಗಳಿಗೆ ಹಾನಿ;3 ದಿನದಲ್ಲಿ ಮೊದಲ ಹಂತದ ಪರಿಹಾರ ವಿತರಣೆ ಪೂರ್ಣ-ಡಿಸಿ ಸಿಂಧೂ ರೂಪೇಶ್…..

ಪುತ್ತೂರು:ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪಗಳಿಂದ 710 ಮನೆಗಳಿಗೆ ಹಾನಿಯಾಗಿದ್ದು, ಮೂರು ದಿನಗಳ ಒಳಗಾಗಿ ಸಂತ್ರಸ್ತರಿಗೆ ಮೊದಲ ಹಂತದ ರೂ.1 ಲಕ್ಷ ಪರಿಹಾರ ವಿತರಣೆಯನ್ನು ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ಅವರು ಶುಕ್ರವಾರ ಮಿನಿವಿಧಾನಸೌಧದ ಕೋರ್ಟ್ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಈಗಾಗಲೇ ಮೊದಲ ಹಂತದ ಪರಿಹಾರ ನೀಡುವ ಕೆಲಸ ನಡೆದಿದೆ. ಮನೆ ಹಾನಿಯ ಬಗ್ಗೆ ತಹಶೀಲ್ದಾರ್ ಕಚೇರಿ ಮೂಲಕ ಬಂದಿರುವ ಮಾಹಿತಿಯನ್ನು ಅವಲಂಭಿಸಿ ಅಂತಹ ಮನೆಗಳನ್ನು ಜಿಪಿಎಸ್ ನಡೆಸಿ ಪರಿಹಾರ ಹಣ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಪ್ರಾಕೃತಿಕ ವಿಕೋಪದಿಂದ ತೊಂದರೆಯಾದ ಜನತೆಗೆ ಅನ್ಯಾಯವಾಗದಂತೆ ಸಮರ್ಪಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೊಳೆರೋಗದ ಪರಿಹಾರದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು ಜಿಲ್ಲೆಯಲ್ಲಿ ಈ ಬಾರಿಯೂ ಕೊಳೆರೋಗ ಸಮಸ್ಯೆಯಿಂದ ಅಡಕೆ ಬೆಳೆಯುವ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಮಳೆ ನಿಂತ ಮೇಲೆ ಸರ್ವೆ ಕಾರ್ಯ ನಡೆಸಲಾಗುತ್ತದೆ. ಆನಂತರ ಅರ್ಜಿ ನೀಡಲು ಜನತೆಗೆ ಅವಕಾಶ ಕಲ್ಪಿಸಲಾಗುವುದು. ಕೊಳೆರೋಗ ಪರಿಹಾರ ನೀಡುವ ಕೆಲಸ ನಡೆಯಲಿದೆ ಎಂದರು.
ಪುತ್ತೂರು ತಾಲೂಕಿನ ಸಾಮೆತ್ತಡ್ಕ ಎಂಬಲ್ಲಿ ಜನವಸತಿಯೇ ಇಲ್ಲದ ಸ್ಥಳವೊಂದಕ್ಕೆ ನಗರಸಭಾ ವತಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನ ಸೆಳೆದಾಗ ಅಂತಹ ಚಟುವಟಿಕೆ ನಡೆದಿದ್ದರೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ತಕ್ಷಣ ಪಕ್ಕದಲ್ಲಿದ್ದ ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ಅವರಿಗೆ ಈ ಬಗ್ಗೆ ತಕ್ಷಣ ನನಗೆ ವರದಿ ಕೊಡಿ ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು ವರದಿ ಬಗ್ಗೆ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button