ಪೊಲೀಸ್ ಸಿಬ್ಬಂದಿಯ ಆದರ್ಶದ ಚಿಂತನೆ-ಮದುವೆ ಉಡುಗೊರೆಯಾಗಿ ವಿಶೇಷ ಚೇತನ ವ್ಯಕ್ತಿಗೆ ಮನೆ ನಿರ್ಮಾಣಕ್ಕೆ ಸಹಾಯ…

ಪುತ್ತೂರು: ಮದುವೆಯ ಸಂದರ್ಭದಲ್ಲಿ ವಧು ವರದು ಉಡುಗೊರೆ ಸ್ವೀಕರಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪೊಲೀಸ್ ಸಿಬ್ಬಂದಿ ತಾನು ಮದುವೆಯಾಗುತ್ತಿರುವ ಶುಭ ಗಳಿಗೆಯಲ್ಲಿ ಬಡ ವಿಶೇಷ ಚೇತನ ವ್ಯಕ್ತಿಯ ಕುಟುಂಬವೊಂದಕ್ಕೆ ಮನೆ ನಿರ್ಮಾಣದ ಸಹಕಾರದ ಉಡುಗೊರೆ ನೀಡುವ ಮೂಲಕ ಆದರ್ಶ ಮೆರೆದಿದ್ದಾರೆ.
ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರೋಹಿತ್ ಕುಲಾಲ್ ಈ ಮಾದರಿ ಕೆಲಸ ಮಾಡಿದ್ದಾರೆ.ಕಡಬ ತಾಲೂಕು ರಾಮಕುಂಜ ಗ್ರಾಮದ ಬೊಳ್ಳೆರೋಡಿ ನಿವಾಸಿ ಚೆನ್ನಪ್ಪ ಕುಲಾಲ್ ಮತ್ತು ಹೇಮಾವತಿ ದಂಪತಿಗಳ ಪುತ್ರರಾದ ಟ್ರಾಫಿಕ್ ಠಾಣೆಯ ಪೊಲೀಸ್ ರೋಹಿತ್ ಕುಲಾಲ್ ಅವರು ಅಮಿತಾ ಎಂಬವರ ಜೊತೆಗೆ ಭಾನುವಾರ ಉಪ್ಪಿನಂಗಡಿಯ ಶಕ್ತಿ ಸಭಾಭವನದಲ್ಲಿ ಅಮಿತಾ ಎಂಬವರ ಜೊತೆಗೆ ವಿವಾಹಿತರಾದರು. ಈ ಸಂದರ್ಭದಲ್ಲೇ ವಿಶೇಷ ಚೇತನ ವ್ಯಕ್ತಿಯೊಬ್ಬರಿಗೆ ಮನೆ ಕಟ್ಟಲು ನಗದು ಮತ್ತು ಸಾಮಗ್ರಿ ರೂಪದ ನೆರವು ಹಸ್ತಾಂತರಿಸುವ ಮೂಲಕ ಆದರ್ಶ ಮೆರೆದಿದ್ದಾರೆ.
ಮದುವೆ ಸಂದರ್ಭ ಬಂಧು ಮಿತ್ರರಿಂದ ಉಡುಗೊರೆ ಸ್ವೀಕರಿಸುವ ಬದಲು, ಬಳ್ಪ ಸಮೀಪದ ಕೇನ್ಯಾ ಗ್ರಾಮದ ನಿವಾಸಿ ಲಿಂಗು ಎಂಬ ವಿಶೇಷ ಚೇತನ ವ್ಯಕ್ತಿಗೆ ಮನೆ ಕಟ್ಟಲು 25 ಸಾವಿರ ರೂ. ನಗದು ಮತ್ತು ಮನೆ ಕಟ್ಟಲು ಬೇಕಾದ ಹಂಚು ಮತ್ತಿತರ ಸಾಮಗ್ರಿಗಳನ್ನು ಹಸ್ತಾಂತರಿಸಿದರು.
ಲಿಂಗು ಅವರು ಕಣ್ಣು ಕಾಣದ, ಕಿವಿ ಕೇಳದ ಸ್ಥಿತಿಯಲ್ಲಿದ್ದು, ಬಂಧುಗಳು ದೂರವಾದ ಕಾರಣ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಮನೆಯಿಲ್ಲದ ಕಾರಣ ಹರಕು ಗುಡಿಸಲಿನಲ್ಲಿ ನೆಲಸಿದ್ದಾರೆ. ಈ ವಿಚಾರವನ್ನು ತನ್ನ ಗೆಳೆಯನಾದ ಯುವ ಬ್ರಿಗೇಡ್‌ನ ತಿಲಕ್‌ರಿಂದ ಕೇಳಿ ತಿಳಿದುಕೊಂಡ ರೋಹಿತ್, ಅವರಿಗೆ ನೆರವು ನೀಡಲು ನಿರ್ಧರಿಸಿದರು. ಅದರಂತೆ ಯುವಬ್ರಿಗೇಡ್ ಕಾರ್ಯಕರ್ತರು ಭಾನುವಾರ ಲಿಂಗು ಅವರನ್ನು ಮದುವೆ ಮಂಟಪಕ್ಕೆ ಕರೆ ತಂದಿದ್ದರು.
ನನಗೆ ಆಡಂಬರದ ಮದುವೆ ಇಷ್ಟವಿಲ್ಲ. ಮೇಲಾಗಿ ಮದುವೆ ಹೆಸರಿನಲ್ಲಿ ಯಾರಿಗಾದರೂ ಸಹಾಯ ಮಾಡಬೇಕೆಂಬ ಆಸೆ ಇತ್ತು. ಅದು ಈಡೇರಿದೆ ಎಂದು ರೋಹಿತ್ ಕುಲಾಲ್ ಹೇಳುತ್ತಾರೆ. ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಅಪೂರ್ವ ಆದರ್ಶವನ್ನು ರೋಹಿತ್ ಮೆರೆದಿದ್ದಾರೆ ಎಂದು ತಿಲಕ್ ತಿಳಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button