ಫಿಲೋಮಿನಾದಲ್ಲಿ ಮಂಗಳೂರು ವಿವಿ ಫುಟ್‍ಬಾಲ್ ಪಂದ್ಯಾಟ ಉದ್ಘಾಟನೆ……
ಪುತ್ತೂರು: ಕ್ರೀಡೆ ಅನಾದಿ ಕಾಲದಿಂದಲೂ ಬೆಳೆದುಕೊಂಡು ಬಂದಿದ್ದು, ಸಮಾಜದ ವಿವಿಧ ವರ್ಗದ ಜನರನ್ನು ಒಗ್ಗೂಡಿಸುವ ವಿಶೇಷ ಶಕ್ತಿ ಕ್ರೀಡೆಯಲ್ಲಿ ಅಡಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಸೋಮವಾರ ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ಮತ್ತು ಸಂತ ಫಿಲೋಮಿನಾ ಕಾಲೇಜು ಇದರ ಆಶ್ರಯದಲ್ಲಿ ಸೆಪ್ಟೆಂಬರ್ 23 ರಿಂದ 26 ರ ತನಕ ಸಂತ ಫಿಲೋಮಿನಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ `ಬಿ. ಸದಾನಂದ ಮತ್ತು ವಾಮನ’ ಸ್ಮರಣಾರ್ಥ ಮಂಗಳೂರು ವಿವಿ ಅಂತರ್ ಕಾಲೇಜು ಮಂಗಳೂರು ವಲಯ ಮತ್ತು ಅಂತರ್ ವಲಯ ಪುರುಷರ ಫುಟ್‍ಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ದ.ಕ ಜಿಲ್ಲಾ ಫುಟ್‍ಬಾಲ್ ಅಸೋಸಿಯೇಶನ್ ಆಧ್ಯಕ್ಷ ಡಿ.ಎಮ್ ಅಸ್ಲಾಮ್ ಮಾತನಾಡಿ ಕ್ರೀಡಾ ಕ್ಷೇತ್ರದ ಯಶಸ್ಸಿಗೆ ಕ್ರೀಡಾ ಸ್ಪೂರ್ತಿಯೇ ತಳಹದಿ. ನಾವು ಸೇವಿಸುತ್ತಿರುವ ಆಹಾರವು ವಿಷಭರಿತವಾಗಿರುವ ಇತ್ತೀಚ್ಛೆಗಿನ ದಿನಗಳಲ್ಲಿ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದು ಅತಿ ಅಗತ್ಯ ಎಂದರು.
ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಫಾ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ. ವಿಜಯ್ ಲೋಬೊ, ತಾಲೂಕು ಯುವ ಸಬಲೀಕರಣ ಹಾಗೂ ಕ್ರೀಡಾಧಿಕಾರಿ ಮಾಮಚ್ಚನ್ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ವೇಟ್ ಲಿಫ್ಟರ್ ಕೃಷ್ಣಪ್ಪ ಗೌಡ ಮತ್ತು ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ಕ್ರೀಡಾಪಟು ಸಜ್ಜನ್ ಕುಮಾರ್ ಕೆ ಅವರನ್ನು ವಿಶೇಷ ಕ್ರೀಡಾ ಸಾಧನೆಗಾಗಿ ಸನ್ಮಾನಿಸಲಾಯಿತು.
ಕಾಲೇಜಿನ ಸಂಚಾಲಕ ಫಾ. ಆಲ್ಫ್ರೆಡ್ ಜೆ ಪಿಂಟೊ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಡೀನ್ ಪ್ರೊ. ಮ್ಯಾಕ್ಸಿಂ ಕಾರ್ಲ್ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿಸೋಜ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ ಸಹಕರಿಸಿದರು. ವ್ಯವಹಾರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು.