ಫಿಲೋಮಿನಾ ಎನ್ನೆಸ್ಸೆಸ್ ಘಟಕದಿಂದ ಒಂದು ದಿನದ ವಿಶೇಷ ಶಿಬಿರ……..
ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನ ಎನ್ನೆಸ್ಸೆಸ್ ಘಟಕಗಳ ಆಶ್ರಯದಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಿಂಜೆಯಲ್ಲಿ ಒಂದು ದಿನದ ವಿಶೇಷ ಶ್ರಮದಾನ ಶಿಬಿರವನ್ನು ಸೆಪ್ಟೆಂಬರ್ 10 ರಂದು ಆಯೋಜಿಸಲಾಯಿತು.
ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಲಾ ಎಸ್ಡಿಎಮ್ ಸಿ ಅಧ್ಯಕ್ಷ ಸದಾಶಿವ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಯಲು ರಾಷ್ಟ್ರೀಯ ಸೇವಾ ಯೋಜನೆಯು ಪ್ರಮುಖ ಪಾತ್ರ ವಹಿಸುತ್ತದೆ. ಎನ್ನೆಸ್ಸೆಸ್ ಘಟಕಗಳು ತಮ್ಮ ಶಿಬಿರವನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸುವುದರಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಅವಕಾಶ ಸಿಕ್ಕಿದಂತಾಗುತ್ತದೆ ಎಂದು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಈ ರೀತಿಯ ಶಿಬಿರಗಳನ್ನು ಆಯೋಜಿಸುವುದರಿಂದ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.
ಶಾಲಾ ದೈಹಿಕ ಶಿಕ್ಷಕಿ ಕಸ್ತೂರಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಧನ್ಯ ಪಿ ಟಿ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ದಿನಕರ್ ಅಂಚನ್ ಸ್ವಾಗತಿಸಿದರು. ಕಾರ್ಯಕ್ರಮಾಧಿಕಾರಿ ಶಶಿಪ್ರಭಾ ಬಿ ವಂದಿಸಿದರು. ಸ್ವಯಂಸೇವಕಿ ಪೂಜಾ ಎಮ್ ಕೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸ್ವಯಂ ಸೇವಕರು ಶ್ರಮದಾನದ ಮೂಲಕ ಕ್ರೀಡಾಂಗಣವನ್ನು ಸುಸ್ಥಿತಿಗೆ ಕೊಂಡೊಯ್ಯುವಲ್ಲಿ ತೊಡಗಿದರು.