ಬಂದರು ಖಾಸಗೀಕರಣಕ್ಕೆ ವಿರೋಧ – ಮಾಜಿ ಸಚಿವ ಯು.ಟಿ. ಖಾದರ್….
ಮಂಗಳೂರು: ಮಂಗಳೂರು ಬಂದರು ಹಾಗೂ ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಕೇಂದ್ರ ಸರಕಾರ ಮುಂದಾಗಿರುವುದನ್ನು ವಿರೋಧಿಸುವುದಾಗಿ ಮಾಜಿ ಸಚಿವ ಯು.ಟಿ. ಖಾದರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅ.9ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎನ್ಎಂಪಿಟಿಯಲ್ಲಿ ಕಂಟೇನರ್ ಗಳ ನಿರ್ವಹಣೆಯ ಒಂದು ವಿಭಾಗವನ್ನು ಚೆಟ್ಟಿನಾಡ್ ಸಂಸ್ಥೆಗೆ ನೀಡಲಾಗಿದೆ. ಇನ್ನೊಂದು ಭಾಗವನ್ನು ಇನ್ನೆರಡು ತಿಂಗಳಲ್ಲಿ ಜೆಎಸ್ ಡಬ್ಲ್ಯೂ ಸಂಸ್ಥೆಗೆ ನೀಡಲು ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯಿಂದ ಸುಮಾರು ನಾಲ್ಕು ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದರು.
ಈ ಸಂಬಂಧ ಸಂಸದರು ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವನ್ನು ಕೇಂದ್ರದ ಸಚಿವರ ಬಳಿ ಕೊಂಡೊಯ್ಯಬೇಕು. ಇಲ್ಲಿ ಉದ್ಯೋಗ ಕಳೆದುಕೊಳ್ಳುವವರಿಗೆ ಪ್ರಥಮ ಆದ್ಯತೆಯಡಿ ಉದ್ಯೋಗ ನೀಡುವ ಕೆಲಸವಾಗಬೇಕು ಜೊತೆಗೆ ನೇಮಕಾತಿ ಸಂದರ್ಭದಲ್ಲಿ ಶೇ.50 ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಅವರು ಆಗ್ರಹಿಸಿದರು.