ಬಾಳ ಯಾನ ಮುಗಿಸಿದ ಆನಂದಣ್ಣ – ಕರಗಿ ಕಣ್ಮರೆಯಾದ ಬಂಟ್ವಾಳದ ದಣಿವರಿಯದ ಸ್ವಯಂಸೇವಕ….

ಬಂಟ್ವಾಳ: ಬಂಟ್ವಾಳದ ಜನಮಾನಸದಲ್ಲಿ ಪಕ್ಷಾತೀತವಾಗಿ ಅನಂದಣ್ಣ ಎಂದೇ ಚಿರಪರಿಚಿತವಾದ ಸಹಕಾರಿ ದುರೀಣ ಹಿರಿಯ ರಾಜಕಾರಣಿ ದಕ್ಷಿಣ ಕನ್ನಡ ಬಿಜೆಪಿಯ ಉಪಾಧ್ಯಕ್ಷ ಜಿ ಅನಂದಣ್ಣ ಇನ್ನಿಲ್ಲ ಎಂಬ ವಾರ್ತೆ ಅವರ ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಯಶಸ್ವಿ ಟೈಲರ್ ಉದ್ಯಮ ನಡೆಸುತ್ತಿದ್ದ ಜಿ ಅನಂದಣ್ಣ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಸ್ವಯಂಸೇವಕ. 1970ರ ದಶಕದ ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ಹೋರಾಟಕ್ಕೆ ಧುಮುಕಿ ಸಮಾಜಕ್ಕೆ ಪ್ರೇರಣೆಯನ್ನು ನೀಡಿದವರು. ಜನ ಸಂಘದ ಮೂಲಕ ರಾಜಕಾರಣಕ್ಕೆ ಪ್ರವೇಶಿಸಿ, ಬಂಟ್ವಾಳ ತಾಲೂಕಿನ ಕಕ್ಕೆಪದವಿನಿಂದ ಮಂಗಳೂರಿನ ಗುರುಪುರದವರೆಗೆ ಲ್ಯಾಂಬಿ ಸ್ಕೂಟರ್ ನಲ್ಲಿ ಸಂಚರಿಸಿ, ಭಾರತೀಯ ಜನತಾ ಪಕ್ಷವನ್ನು ಸಂಘಟಿಸಿದ ಮೇರುವ್ಯಕ್ತಿತ್ವ. ಎರಡು ಬಾರಿ ಬಂಟ್ವಾಳ ಪುರಸಭೆಯ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸಿದ ಇವರು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಭದ್ರ ತಳಪಾಯಕ್ಕೆ ಬೆವರು ಸುರಿಸಿದ ಅಗ್ರಪಂಕ್ತಿಯ ನಾಯಕ. ಬಿಜೆಪಿ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನಂತರ ಎರಡು ಅವಧಿಯಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ ಇವರು ಅಸಂಖ್ಯಾತ ಕಾರ್ಯಕರ್ತರನ್ನು ನಾಯಕರನ್ನಾಗಿ – ಜನಪ್ರತಿನಿಧಿಗಳಾಗಿ ಬೆಳೆಸಿದ ಮೇರು ಸದೃಶ ವ್ಯಕ್ತಿತ್ವ. 1990 ದಶಕದ ಅಯೋಧ್ಯಾ ಹೋರಾಟದಲ್ಲಿ ಕರಸೇವಕರಾಗಿ ಭಾಗಿಯಾಗಿದ್ದ ಅನಂದಣ್ಣ 2017 ರಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರ ನೇತೃತ್ವದ ಪರಿವರ್ತನಾ ಯಾತ್ರೆ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಅಗಮಿಸಿದಾಗ ನಗರ ಅಲಂಕಾರಕ್ಕೆ ಬೇಕಾದ ಭಾರತೀಯ ಜನತಾ ಪಕ್ಷದ ಧ್ವಜಗಳನ್ನು ತಮ್ನ ಕೈಯಾರೆ ಸಿದ್ದಪಡಿಸಿ ನಗರ ಅಲಂಕಾರವನ್ನು ಮಾಡಿದವರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಣಿಯೂರು ಶಕ್ತಿ ಕೇಂದ್ರದ ಪ್ರಭಾರಿಯಾಗಿ ಇಳಿ ವಯಸ್ಸಿನಲ್ಲೂ ಪಕ್ಷದ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿ ಬಾಗಿಯಾಗಿದ್ದರು. ದಕ್ಷಿಣ ಕನ್ನಡ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರಾಗಿ ಪ್ರಸ್ತುತ ಜವಾಬ್ದಾರಿ ನಿರ್ವಹಿಸುತ್ತಿದ್ದ ಅನಂದಣ್ಣ ಮೂರು ಅವಧಿಯಲ್ಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲಿ ಅನುಪಮವಾದ ಸೇವೆ ಸಲ್ಲಿಸಿದ ಹಿರಿಯ ಚೇತನ.

Sponsors

Related Articles

Leave a Reply

Your email address will not be published. Required fields are marked *

Back to top button