ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಎನರ್ಜಿ ಮ್ಯಾನೇಜ್ಮೆಂಟ್ ಸೆಂಟರ್ ನ ಉದ್ಘಾಟನೆ…

ಪುತ್ತೂರು: ಕೆಲ ಸಮಯದ ಹಿಂದೆ ವಿದ್ಯುಚ್ಚಕ್ತಿಯನ್ನು ವಿತರಿಸುವ ಕಾರ್ಯ ಸವಾಲಿನದಾಗಿತ್ತು. ಆದರೆ ಈಗ ವಿತರಣೆಯಲ್ಲಾಗುವ ನಷ್ಟವನ್ನು ಕಂಡುಹಿಡಿದು ಸರಿಪಡಿಸುವ ಕಾರ್ಯ ಅತ್ಯಂತ ಸವಾಲಿನದ್ದಾಗಿದೆ ಎಂದು ಮೆಸ್ಕಾಂ ಪುತ್ತೂರು ವಿಭಾಗದ ಎಇಇ ರಾಮಚಂದ್ರ.ಎ ಹೇಳಿದರು.
ಅವರು ಬ್ಯೂರೋ ಆಫ್ ಎನರ್ಜಿ ಎಫಿಸಿಯನ್ಸಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಶ್ರೀರಾಮ ಸಭಾ ಭವನದಲ್ಲಿ ನಡೆದ ವಿವೇಕಾನಂದ ಎನರ್ಜಿ ಮ್ಯಾನೇಜ್ಮೆಂಟ್ ಸೆಂಟರಿನ ಉದ್ಘಾಟನೆಯನ್ನು ಮಾಡಿ ಮಾತನಾಡಿದರು.
ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಶಕ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ ಮತ್ತು ಗುಣಮಟ್ಟದ ಉಪಕರಣಗಳ ಬಳಕೆಯಾಗುತ್ತಿದೆ ಎಂದರು. ಇಲ್ಲಿ ಪ್ರಾರಂಭವಾದ ಎನರ್ಜಿ ಮ್ಯಾನೇಜ್ಮೆಂಟ್ ಸೆಂಟರಿಗೆ ಇಲಾಖೆಯಿಂದ ಅಗತ್ಯ ನೆರವನ್ನು ಹಾಗೂ ಮಾರ್ಗದರ್ಶನವನ್ನು ನೀಡುವುದಕ್ಕೆ ನಾವು ಉತ್ಸುಕರಾಗಿದ್ದೇವೆ ಎಂದರು.
ಇನ್ನೋರ್ವ ಅತಿಥಿ ಮೈಸೂರಿನ ರಚನಾ ಎನರ್‍ಕೇರ್ ಸಂಸ್ಥೆಯ ಮುಖ್ಯಸ್ಥ ಹಾಗೂ ಇಂಧನ ಶಕ್ತಿಗಳ ತಂತ್ರಜ್ಞ ಅನಿಲ್ ಕುಮಾರ್ ನಾಡಿಗೇರ್ ಮಾತನಾಡಿ ಭಾರತವು 90% ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಜಾಗತಿಕ ಪರಿಸ್ಥಿತಿಗಳ ವೈಪರೀತ್ಯದಿಂದಾಗಿ ಬೆಲೆಯಲ್ಲಿ ಏರಿಳಿತವಾಗುತ್ತಿದೆ ಅಲ್ಲದೆ ಅಭದ್ರತೆಯೂ ಕಾಡುತ್ತದೆ ಎಂದರು. ಅಗಾಧ ಶಕ್ತಿಯನ್ನು ನೀಡುವ ಪ್ರಕೃತಿಯ ವಿರುದ್ದವಾಗಿ ನಾವು ಹೋದಂತೆ ಅದು ತಿರುಗಿಬೀಳುತ್ತದೆ ಪ್ರಸ್ತುತ ನಡೆಯುತ್ತಿರುವ ಘಟನೆಗಳು ಇದಕ್ಕೆ ಸಾಕ್ಷಿ ಎಂದರು. ನನ್ನಿಂದಲೇ ಶಕ್ತಿಯ ಉಳಿತಾಯ ಪ್ರಾರಂಭವಾಗಲಿ ಎನ್ನುವ ಮನಸ್ಥಿತಿ ಪ್ರತಿಯೊಬ್ಬರಲ್ಲಿಯೂ ಉಂಟಾದರೆ ನಾವು ಶಕ್ತಿಯ ಸ್ವಾವಲಂಬನೆಯನ್ನು ಸಾಧಿಸಬಹುದು ಎಂದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೆಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಇಂಧನ ಶಕ್ತಿಯ ಬಳಕೆ ಮತ್ತು ಉಳಿಕೆಯ ವಿಷಯ ಅಗಾಧವಾದದ್ದು ಮತ್ತು ಅಗತ್ಯವಾದದ್ದು ಎಂದರು. ಇದರ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯಬೇಕು, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್‍ನಂತಹ ನೂತನ ತಂತ್ರಜ್ಞಾನಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಶಕ್ತಿಯ ನಷ್ಟವನ್ನು ತಗ್ಗಿಸಿಕೊಳ್ಳಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ನವೀಕರಿಸಬಹುದಾದ ಇಂಧನಗಳ ಬಗ್ಗೆ ಜಾಗೃತಿ ಮೂಡುತ್ತಿರುವುದು ಸಂತೋಷದಾಯಕ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ, ಕಾರ್ಯಕ್ರಮ ಸಂಯೋಜಕ ಪ್ರೊ.ನವೀನ್.ಎಸ್.ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಸ್ವಾಗತಿಸಿ, ಪ್ರೊ.ಹರೀಶ್.ಎಸ್.ಆರ್ ವಂದಿಸಿದರು. ಕು.ರಚನಾ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಇಂಧನ ದಕ್ಷತೆ ಮತ್ತು ಇಂಧನ ಉಳಿತಾಯ ಎನ್ನುವ ವಿಷಯದ ಬಗ್ಗೆ ನುರಿತ ತಜ್ಞರಿಂದ ಮಾಹಿತಿ ಕಾರ್ಯಾಗಾರವು ನಡೆಯಿತು. ಮೈಸೂರಿನ ರಚನಾ ಎನರ್‍ಕೇರ್‍ನ ಬಿ.ಎನ್.ಶೇಖರ್, ಅರಿಣಿ ಶ್ರೀನಿವಾಸ್ ಹಾಗೂ ಡಾ.ಗಂಗಾಧರ್ ನಾಯರ್ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.

vemc4
vemc1
vemc3
Sponsors

Related Articles

Back to top button