ಮಂಗಳೂರು ಗೋಲಿಬಾರ್ಗೆ ಯಡಿಯೂರಪ್ಪ ನೇರ ಹೊಣೆ – ರಮಾನಾಥ ರೈ…
ಮಂಗಳೂರು : ಪೌರತ್ವ ಮಸೂದೆಯ ವಿರುದ್ದ ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಹಾಗೂ ಪೊಲೀಸರು ನಡೆಸಿದ ಗೋಲಿಬಾರ್ಗೆ ಇಬ್ಬರು ಬಲಿಯಾಗಲು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತೆಗೆದುಕೊಂಡ ನಿರ್ಧಾರವೇ ಕಾರಣ, ಈ ವಿಚಾರದ ಬಗ್ಗೆ ನ್ಯಾಯಾಧೀಶರು ತನಿಖೆ ಮಾಡಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇದೀಗ ಪೌರತ್ವ ಮಸೂದೆಯ ಬಗ್ಗೆ ಹಾಗೂ ಎನ್ಆರ್ಸಿ ಯ ಕುರಿತಾಗಿ ತೀವ್ರವಾದ ವಿರೋಧ ನಡೆಯುತ್ತಿದೆ. ರಾಜ್ಯದಲ್ಲಿ ಶಾಂತಿಯುತವಾದ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಸೆಕ್ಷನ್ 144ನ್ನು ಜಾರಿಗೊಳಿಸಿದ್ದು ತಪ್ಪು. ಮುಖ್ಯಮಂತ್ರಿ ತೆಗೆದುಕೊಂಡ ನಿರ್ಧಾರ ಸರಿಯಾಗಿಲ್ಲ, ಗೋಲಿಬಾರ್ ವೇಳೆ ಬಲಿಯಾದ ಇಬ್ಬರ ಸಾವಿಗೆ ಮುಖ್ಯಮಂತ್ರಿ ಹಾಗೂ ಗೃಹಸಚಿವರೇ ಕಾರಣ ಎಂದಿದ್ದಾರೆ.
ವಿಪಕ್ಷದವರಿಗೆ ಸಂತ್ರಸ್ತರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ, ಈ ರೀತಿಯಾದ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುತ್ತೇನೆ, ಕಾಂಗ್ರೆಸ್ ಪಕ್ಷದ ಯಾವುದೇ ಮುಖಂಡರು ಪ್ರಚೋದನಕಾರಿ ಹೇಳಿಕೆಗಳನ್ನು ಕೊಡುವುದಿಲ್ಲ, ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಆರೋಪಿಗಳಾಗಿರುವುದು ಕೋಮುವಾದಿ ಪಕ್ಷದವರು ಎಂದು ರಮಾನಾಥ ರೈ ಹೇಳಿದ್ದಾರೆ.