ವಿವೇಕಾನಂದ ಇಂಜಿಯರಿಂಗ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ದೃಷ್ಟಿ-2023 …

"ನಿರ್ವಹಣೆ ಮತ್ತು ತಂತ್ರಜ್ಞಾನದಲ್ಲಿ ಹೊಸಯುಗ" ವಿಷಯದಲ್ಲಿ 200ಕ್ಕೂ ಮಿಕ್ಕಿ ಸಂಶೋಧನಾ ಪ್ರಬಂಧಗಳ ಪ್ರಸ್ತುತಿ…

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ಮತ್ತು ಎಂಸಿಎ ವಿಭಾಗ ಹಾಗೂ ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯ ಇದರ ಸಂಯುಕ್ತ ಆಶ್ರಯದಲ್ಲಿ ನಿರ್ವಹಣೆ ಮತ್ತು ತಂತ್ರಜ್ಞಾನದಲ್ಲಿ ಹೊಸಯುಗ ಎನ್ನುವ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ದೃಷ್ಟಿ-2023 ಜುಲೈ 26 ರಂದು ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ನಡೆಯಲಿದೆ.
ಪ್ರಪಂಚದಾದ್ಯಂತ ಶಿಕ್ಷಣ ತಜ್ಞರು, ಸಂಶೋಧಕರು ವಿದ್ಯಾರ್ಥಿಗಳು ಮತ್ತು ಉದ್ಯಮ ಕ್ಷೇತ್ರದ ತಜ್ಞರನ್ನು ಒಟ್ಟುಗೂಡಿಸಿ, ನಿರ್ವಹಣೆ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬಗ್ಗೆ ಬೆಳಕುಚೆಲ್ಲುವ, ಚರ್ಚೆ ಹಾಗೂ ವಿಚಾರ ವಿನಿಮಯವನ್ನು ನಡೆಸುವ ಉದ್ದೇಶದಿಂದ ಇದನ್ನು ಸಂಘಟಿಸಲಾಗಿದ್ದು, ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 200ಕ್ಕೂ ಮಿಕ್ಕಿ ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಿಗಾಗಿ ಸ್ವೀಕರಿಸಲಾಗಿದೆ.
ಉದ್ಘಾಟನಾ ಸಮಾರಂಭ: ಅಂದು ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭವು ನಡೆಯಲಿದ್ದು ಎನ್‍ಐಟಿಕೆ ಸುರತ್ಕಲ್‍ನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಐಇಇಇ ಮಂಗಳೂರು ಉಪ ವಿಭಾಗದ ಅಧ್ಯಕ್ಷರೂ ಆಗಿರುವ ಡಾ.ಮೋಹಿತ್.ಪಿ.ತಹಿಲಿಯಾನಿ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ. ಸುಲ್ತಾನೇಟ್ ಆಫ್ ಒಮನ್ ಮಸ್ಕತ್ತಿನ ಬ್ಯಾಂಕಿಂಗ್ ಮತ್ತು ಹಣಕಾಸು ಅಧ್ಯಯನ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಆನಂದ್ ಸೂರ್ಯನಾರಾಯಣ ಹಾಗೂ ಯುನಿವರ್ಸಿಟಿ ಆಫ್ ವೆಸ್ಟರ್ನ ಆಸ್ಟ್ರೇಲಿಯಾದ ಪ್ರಾದೇಶಿಕ ವ್ಯವಸ್ಥಾಪಕಿ ಶಶಿರೇಖಾ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ. ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಡಾ.ಮೋಹಿತ್.ಪಿ.ತಹಿಲಿಯಾನಿ ಅವರು ತಂತ್ರಜ್ಞಾನ ಪ್ರಪಂಚದ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ. ಡಾ.ಆನಂದ್ ಸೂರ್ಯನಾರಾಯಣ ಅವರು ನಿರ್ವಹಣಾ ಕ್ಷೇತ್ರದಲ್ಲಿನ ತಮ್ಮ ಆಳವಾದ ಅಧ್ಯಯನದ ವಿವರಗಳನ್ನು ವಿಸ್ತೃತವಾಗಿ ವಿವರಿಸಲಿದ್ದಾರೆ.
ಸಮಾರೋಪ ಸಮಾರಂಭ: ಅಂದು ಸಂಜೆ 4.15ಕ್ಕೆ ಸಮಾರೋಪ ಸಮಾರಂಭವು ನಡೆಯಲಿದ್ದು ಸ್ವಾಯತ್ತ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣುಗಣಪತಿ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್.ಬಿ ಅಧ್ಯಕ್ಷತೆ ವಹಿಸುತ್ತಾರೆ.
ವಿವಿಧ ಸ್ಥಳಗಳಿಂದ ಆಸಕ್ತರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕಾಗಿ ಆನ್‍ಲೈನ್ ಹಾಗೂ ಆಫ್‍ಲೈನ್ ವಿಧಾನಗಳೆರಡರಲ್ಲೂ ನಡೆಸಲಾಗುತ್ತದೆ.
ದೃಷ್ಟಿ-2023ರ ಅಭೂತಪೂರ್ವ ಯಶಸ್ಸಿಗಾಗಿ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಅವರ ಮಾರ್ಗದರ್ಶನದಲ್ಲಿ ಸಮ್ಮೇಳನದ ಸಂಚಾಲಕರಾದ ಡಾ.ಶೇಖರ್.ಎಸ್.ಅಯ್ಯರ್, ಡಾ.ವಂದನಾ.ಬಿ.ಎಸ್, ಸಂಘಟನಾ ಕಾರ್ಯದರ್ಶಿ ಡಾ.ರಾಬಿನ್.ಎಂ.ಶಿಂಧೆ ಹಾಗೂ ಉಪನ್ಯಾಸಕರ ತಂಡವು ಅವಿರತವಾಗಿ ಶ್ರಮಿಸುತ್ತಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

drishti1 2023
drishti 2023
Sponsors

Related Articles

Back to top button