ಮಹಾರಾಷ್ಟ್ರ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆ: ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ…..
ಮುಂಬೈ : ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಜಿತ್ ಪವರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.ಶನಿವಾರ ಬೆಳಗ್ಗೆ ರಾಜಭವನದಲ್ಲಿ ಸರಳವಾಗಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಅವರು ಪ್ರಮಾಣ ವಚನ ಬೋಧಿಸಿದರು.
ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಇಂದು ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನ್ಯಾಷನಲ್ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರ ರಾಜಕೀಯ ಲೆಕ್ಕಾಚಾರ ತಲೆಕೆಳಗಾಗಿದೆ. ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ಬೆನ್ನಲ್ಲೇ ಈಗ ಬಿಜೆಪಿ ಹಾಗೂ ಎನ್ ಸಿ ಪಿ ಪಕ್ಷಗಳು ಮೈತ್ರಿ ಸರಕಾರ ರಚಿಸಿದ ತೀವ್ರ ಅಚ್ಚರಿಯ ಬೆಳವಣಿಗೆ ಆಗಿದೆ.
ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಸಿಎಂ ಫಡ್ನವಿಸ್, ಮಹಾರಾಷ್ಟ್ರ ಜನರಿಗೆ ಬಿಜೆಪಿ ಸ್ಥಿರ ಸರ್ಕಾರ ನೀಡಲು ಬಯಸಿದೆ. ಮೈತ್ರಿ ಪಕ್ಷ ಶಿವಸೇನಾ ಜನರ ಆದೇಶವನ್ನು ಪಾಲಿಸಲಿಲ್ಲ. ಹೀಗಾಗಿ ಸರ್ಕಾರ ರಚನೆ ಮಾಡಲು ಬೆಂಬಲ ನೀಡಿದ ಎನ್ಸಿಪಿಗೆ ಧನ್ಯವಾದಗಳು. ಕಳೆದ ಕೆಲ ದಿನಗಳಿಂದ ರಾಷ್ಟ್ರಪತಿ ಆಳ್ವಿಕೆ ಇದುದ್ದನ್ನು ನಾವೆಲ್ಲ ನೋಡಿದ್ದೇವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಹೀಗಾಗಿ ಈ ದಿಢೀರ್ ಬೆಳವಣಿಗೆ ರಾಜ್ಯದ ಅಭಿವೃದ್ಧಿಗೆ ಆಶಾದಾಯಕವಾಗಲಿದೆ ಎಂದು ತಿಳಿಸಿದ್ದಾರೆ.ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಅಜಿತ್ ಪವಾರ್ ಮಾತನಾಡಿ ಫಲಿತಾಂಶ ಬಂದ ದಿನದಿಂದ ಇಲ್ಲಿಯವರೆಗೂ ಯಾವ ಪಕ್ಷವು ಸರ್ಕಾರ ರಚಿಸಲು ಸಮರ್ಥವಾಗಿರಲಿಲ್ಲ. ಇದರಿಂದ ರೈತರು ಸೇರಿದಂತೆ ಮಹಾರಾಷ್ಟ್ರವು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿತ್ತು. ಹೀಗಾಗಿ ಸರ್ಕಾರ ರಚಿಸಲು ನಾವು ನಿರ್ಧರಿಸಿದೆವು ಎಂದು ಹೇಳಿದರು.