ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ ಸಂಘಟನಾ ಶಕ್ತಿಯಿದೆ: ಶಯನಾ ಜಯಾನಂದ್
ಪುತ್ತೂರು: ಯುವಶಕ್ತಿಗೆ ಪ್ರೇರಣಾದಾಯಕವಾದ ಹಿರಿಯರು ಸಂಘಟನೆಗೆ ಕ್ರೀಡೆಯನ್ನು ಆಯ್ದುಕೊಂಡರು. ಇವತ್ತು ನಮ್ಮ ದೇಶದ ಕ್ರೀಡೆ ಕಬಡ್ಡಿಗೆ ಹೆಚ್ಚಿನ ಮಹತ್ವ ಇದೆ. ಎಲ್ಲೋ ಮೂಲೆಯಲ್ಲಿದ್ದ ಕಬಡ್ಡಿ ಇವತ್ತು ಅತಿ ಹೆಚ್ಚು ಪ್ರಾಶಸ್ತ್ಯ ಪಡೆಯಲು ಸಂಘಟನೆಯೇ ಕಾರಣ. ಅದೇ ರೀತಿ ಕಬಡ್ಡಿಯಿಂದಲೂ ಸಂಘಟನೆಯ ಶಕ್ತಿ ಹೆಚ್ಚುತ್ತದೆ ಎಂದು ಜಿ.ಪಂ ಸದಸ್ಯೆ ಶಯನಾ ಜಯಾನಂದ್ ಹೇಳಿದರು.
ಅವರು ಪಡ್ನೂರು ಶ್ರೀರಾಂ ಫ್ರೆಂಡ್ಸ್ ಕ್ಲಬ್ ವತಿಯಿಂದ ಇಲ್ಲಿನ ಶಾಲಾ ವಠಾರದಲ್ಲಿ ನಡೆದ 7ನೇ ವರ್ಷದ ಪುರುಷರ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟವನ್ನು ಸಭಾ ಕಾರ್ಯಕ್ರಮವನ್ನು ನ.17 ರಂದು ಉದ್ಘಾಟಿಸಿ ಮಾತನಾಡಿದರು.
ತಾ.ಪಂ ಸದಸ್ಯೆ ದಿವ್ಯಾ ಪುರುಷೋತ್ತಮ ಮುಂಗ್ಲಿಮನೆ ಅವರು ಮಾತನಾಡಿ ಶ್ರೀರಾಮ್ ಫ್ರೆಂಡ್ಸ್ ತನ್ನ ಕ್ರೀಡಾ ಚಟುವಟಿಕೆಯ ಜೊತೆಗೆ ಸಮಾಜ ಸೇವೆಗೆ ಕಬಡ್ಡಿಯ ಮೂಲಕ ಹಿಂದೂ ಧರ್ಮದ ಏಳಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರೈತಮೋರ್ಛಾ ಪುತ್ತೂರು ಮಂಡಲದ ಅಧ್ಯಕ್ಷ ರಾಜರಾಮ ಶೆಟ್ಟಿ ಕೋಲ್ಪೆ ಅವರು ಮಾತನಾಡಿ ಪ್ರಸ್ತುತ ಯುವ ಪೀಳಿಗೆಗೆಯನ್ನು ಪುಸ್ತಕದ ಮೆಷಿನ್ ಆಗಿ ನೋಡುವುದು ಸರಿಯಲ್ಲ. ಹೊರಜಗತ್ತಿನ ಭಾರತೀಯ ಕ್ರೀಡೆಯ ಕುರಿತು ಅರಿವು ಮೂಡಿಸುವುದು ಉತ್ತಮ. ಈ ನಿಟ್ಟಿನಲ್ಲಿ ಮಕ್ಕಳಿಗೆ ಆರಂಭದಲ್ಲೇ ಕ್ರೀಡೆಯ ಕುರಿತು ಹೆಚ್ಚಿನ ಆಸಕ್ತಿ ವಹಿಸುವಂತೆ ಮಾಡಬೇಕು. ಇದು ಮುಂದೆ ಸಂಘಟನಾ ಶಕ್ತಿಗೂ ಪ್ರೇರಣಾದಾಯವಾಗುತ್ತದೆ ಎಂದರು.
ಪಂಚಾಯತ್ ಸಮಿತಿ ಬನ್ನೂರು ಇದರ ಅಧ್ಯಕ್ಷ ಬಾಲಕೃಷ್ಣ ಜೋಯಿಷ ಯರ್ಮುಂಜ, ಪಶು ವೈದ್ಯ ರಾಮಚಂದ್ರ ಭಟ್, ಕಬಕ ಗ್ರಾ.ಪಂ ಸದಸ್ಯ ವಸಂತ ನೆಕ್ಕರೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪಡ್ನೂರು ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಪೆರ್ವೋಡಿ, ಗೆಳೆಯರ ಬಳಗ ಯರ್ಮುಂಜಪಳ್ಳ ಇದರ ಅಧ್ಯಕ್ಷ ವೀರಪ್ಪ ಗೌಡ, ಪಡ್ನೂರು ಜನಾರ್ದನ ಯುವಕ ಮಂಡಲದ ಅಧ್ಯಕ್ಷ ಸತೀಶ್ ಆಟಿಕ್ಕು, ಆದಿಶಕ್ತಿ ಭಜನಾ ಮಂದಿರ ಬೇರಿಕೆ ಇದರ ಅಧ್ಯಕ್ಷ ಯಾದವ ಬೇರಿಕೆ, ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕುಂಜಾರು ಇದರ ಅಧ್ಯಕ್ಷ ಸುರೇಂದ್ರ ಆಟಿಕ್ಕು, ಶ್ರೀ.ಕ್ಷೇ.ಧ.ಗ್ರಾ.ಯೋ ಪಡ್ನೂರು ಇದರ ಅಧ್ಯಕ್ಷ ಮೋಹನದಾಸ ಶೆಟ್ಟಿ ರಾಮನಗರ, ಪಡ್ನೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಂಗಾಧರ ಪೂಜಾರಿ ಕುಂಜಾರು, ಗಿರಿಜಾ ವೆಲ್ಫೇರ್ ಅಸೋಸಿಯೇಷನ್ ಮುಂಬೈ ಇದರ ಅಧ್ಯಕ್ಷ ವಸಂತ ಸಪಲ್ಯ ಕುಂಜಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನುಫ್ ಬೇರಿಕೆ ಸ್ವಾಗತಿಸಿದರು. ನವೀನ್ ಕುಂಜಾರು ವಂದಿಸಿದರು. ಶ್ರೀರಾಮ್ ಫ್ರೆಂಡ್ಸ್ ನ ಗೌರವಾಧ್ಯಕ್ಷ ನವೀನ್ ಪಡ್ನೂರು ಕಾರ್ಯಕ್ರಮ ನಿರೂಪಿಸಿದರು.