ರಾಮ ಮಂದಿರದ ಕಲಾಕೃತಿಯ ಅನಾವರಣ….

ಬಂಟ್ವಾಳ: ಅಯೋಧ್ಯೆಯಲ್ಲಿ ಸುಮಾರು 72 ಎಕ್ರೆ ವಿಸ್ತಾರವಾದ ಜಾಗದಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರವು ವಿದೇಶಿ ಪ್ರವಾಸಿಗರನ್ನೂ ಆಕರ್ಷಿಸಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ.ಪ್ರಭಾಕರ ಭಟ್ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಯೋಧ್ಯಾ ಕಟ್ಟಡದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲ್ಲಡ್ಕ ಶಿಲ್ಪ ಗೊಂಬೆ ಬಳಗದ ರೂವಾರಿ ರಮೇಶ್ ಕಲ್ಲಡ್ಕ ಅವರು ನಿರ್ಮಸಿದ ರಾಮ ಮಂದಿರದ ಕಲಾಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದರು.
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಇರುವ ಎಲ್ಲಾ ಅಡೆತಡೆಗಳು ಇಲ್ಲವಾಗಿದೆ. ಹಲವು ವರ್ಷಗಳ ಹೋರಾಟದ ಫಲವಾಗಿ ಶ್ರೀರಾಮ ಜನ್ಮಭೂಮಿಯಲ್ಲೇ ಎಲ್ಲರ ಅಪೇಕ್ಷೆಯಂತೆ ರಾಮ ಮಂದಿರ ನಿರ್ಮಾಣವಾಗಲಿದೆ. ಹಿಂದುಗಳ ಪವಿತ್ರ ಸ್ಥಾನವಾಗಿ ಬೆಳಗಲಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್‍ಕಟ್ಟೆ , ಕುಶಾಲಪ್ಪ ಅಮ್ಟೂರು, ಕಲಾಕಾರ ರಮೇಶ್ ಕಲ್ಲಡ್ಕ ಉಪಸ್ಥಿತರಿದ್ದರು.

ಕನ್ನಡ ಮಾಧ್ಯಮ ಖಾಸಗಿ ಶಾಲೆಗಳಿಗೆ ಅಕ್ಷರ ದಾಸೋಹ ವ್ಯವಸ್ಥೆಯನ್ನು ಹಾಗೂ ಶಿಕ್ಷಕರನ್ನು ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ. ಕನ್ನಡ ಶಾಲೆಯನ್ನು ಉಳಿಸುವ ಜವಾಬ್ದಾರಿ ಸರಕಾರದ್ದೇ ಆಗಿದೆ ಎಂದು ಕೂಡ ಡಾ.ಪ್ರಭಾಕರ ಭಟ್ ಈ ಸಂದರ್ಭದಲ್ಲಿ ಹೇಳಿದರು.
ಕಲ್ಲಡ್ಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡುವುದರಿಂದ ಮಕ್ಕಳಲ್ಲಿ ಜ್ಞಾನ ಮತ್ತು ಬುದ್ದಿವಂತಿಕೆ ಹೆಚ್ಚಾಗುತ್ತದೆ. ಕ್ರಿಯಾಶೀಲತೆ ಬೆಳೆಯುತ್ತದೆ. ಬಾಲ್ಯದ ಮಾತೃಭಾಷೆ ಶಿಕ್ಷಣ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಭಾರತೀಯ ಭಾಷೆಗಳೆಲ್ಲವೂ ಮೂಲ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ. ಯಾವುದೇ ಭಾಷೆಯನ್ನು ಕಲಿಯಬಹುದು. ಆದರೆ ದೇಶದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಹಿಂದಿ ಸಂಪರ್ಕ ಭಾಷೆಯಾಗಿ ಇರಬೇಕೆಂಬುದು ಎಲ್ಲರ ಅಪೇಕ್ಷೆಯಾಗಿದೆ ಎಂದರು.
ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಶಿಕ್ಷಣವನ್ನು ಪ್ರಾರಂಭಿಸಿರುವುದರಿಂದ ಇತ್ತ ಕನ್ನಡವೂ ಅಲ್ಲದ ಅತ್ತ ಇಂಗ್ಲೀಷ್ ಅಲ್ಲದ ಕಂಗ್ಲೀಷ್ ಭಾಷೆ ಬೆಳೆಯುತ್ತದೆ. ಆಂಗ್ಲಮಾಧ್ಯಮದಲ್ಲಿ ಕಲಿಸುವುದರಿಂದ ನಮ್ಮತನ ನಮ್ಮ ಸಂಸ್ಕೃತಿಯೊಂದಿಗೆ ಭಾವನಾತ್ಮಕ ಸಂಬಂಧ ಅಳಿಯುತ್ತದೆ. ಸರಕಾರಿ ಹಾಗೂ ಕನ್ನಡ ಶಾಲೆಗಳನ್ನು ಉಳಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಸರಕಾರಿ ಶಾಲೆ ಉಳಿಸಲು ಆಂಗ್ಲಮಾಧ್ಯಮ ಪ್ರಾರಂಭಿಸುವುದು ಪರಿಹಾರವಲ್ಲ. ಈಗಾಗಲೇ ಹಿಂದಿನ ಸರಕಾರ ಸರಕಾರಿ ಶಾಲೆಗಳಲ್ಲಿ ಶಿಕ್ಷಕರನ್ನೂ ಹಾಗೂ ಬೇಕಾದ ಅವಶ್ಯಕತೆಗಳನ್ನು ಒದಗಿಸದೆ ಇಂಗ್ಲೀಷ್ ಶಿಕ್ಷಣ ಪ್ರಾರಂಭಿಸಿರುವುದು ಡೊನೇಷನ್ ಸಂಸ್ಕೃತಿಯನ್ನು ಬೆಳೆಸಲು ಕಾರಣವಾಗಿದೆ. ನಮಗೆ ಇಂಟರ್ ನ್ಯಾಷನಲ್ ಸ್ಕೂಲ್ ಅಗತ್ಯವಿಲ್ಲ. ಭಾರತೀಯ ಶಿಕ್ಷಣ ಮಕ್ಕಳಿಗೆ ನೀಡಿದರೆ ದೇಶ ಅಭಿವೃದ್ಧಿ ಆಗುತ್ತದೆ ಸಂಸ್ಕೃತಿ ಉಳಿಯುತ್ತದೆ ಎಂದು ಅವರು ಹೇಳಿದರು.

Sponsors

Related Articles

Leave a Reply

Your email address will not be published. Required fields are marked *

Back to top button