ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ಎನ್ ಬಿ ಎ ಮಾನ್ಯತೆ….

ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿಯ (ಎನ್ ಬಿ ಎ) ಮಾನ್ಯತೆ ಸಿಕ್ಕಿರುತ್ತದೆ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಎನ್ ಬಿ ಎ ಯು ನವದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಪರೀಕ್ಷಿಸುವ ಜತೆಗೆ ಭಾರತದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಉತ್ತೇಜಿಸುವ ಸ್ವಾಯತ್ತ ಸಂಸ್ಥೆಯಾಗಿದೆ.
ಎನ್‍ಬಿಎ ಎಂದರೆ ಶೈಕ್ಷಣಿಕ ಸಂಸ್ಥೆಯು ನಿರ್ಧಿಷ್ಟ ಗುಣಮಟ್ಟವನ್ನು ಹೊಂದಿದೆಯೇ ಅಥವಾ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುತ್ತದೆಯೇ ಎನ್ನುವುದನ್ನು ವೃತ್ತಿಪರ ಪರಿಶೀಲನೆಯ ಅಧಾರದ ಮೇಲೆ ಮೌಲ್ಯಮಾಪನ ಮಾಡಿ ದೃಢೀಕರಿಸುವ ಪ್ರಕ್ರಿಯೆ. ಇದರ ಪ್ರಾಥಮಿಕ ಉದ್ದೇಶವೇನೆಂದರೆ ಈ ಸಂಸ್ಥೆಯಿಂದ ಹೊರಬರುವ ಪದವೀಧರರು ವಿವಿಧ ತಾಂತ್ರಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಮತ್ತು ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಗರಿಷ್ಟ ಮಟ್ಟದ ಸಾಮರ್ಥ್ಯವನ್ನು ಸಾಧಿಸಿ ಗ್ರಾಹಕ ರಕ್ಷಣೆಯ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಭರವಸೆಯನ್ನು ನೀಡುವುದಾಗಿದೆ.
ಎನ್‍ಬಿಎ ಮಾನ್ಯತೆಯ ಉದ್ದೇಶಗಳು: ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಗುಣಮಟ್ಟದ ನಿರ್ವಹಣೆ ಮತ್ತು ಬಲವರ್ಧನೆ. ವಿದ್ಯಾರ್ಥಿಗಳೂ ಸೇರಿದಂತೆ ಸಂಸ್ಥೆಯ ಪಾಲುದಾರರಿಗೆ ವಿವಿಧ ಬಗೆಯ ಗುಣಮಟ್ಟದ ವಿಶ್ವಾಸ ಮತ್ತು ಭರವಸೆಯನ್ನು ನೀಡುವುದು. ಸಂಸ್ಥೆಗಳಿಗೆ ಸರ್ಕಾರಿ ವಿಭಾಗ ಮತ್ತು ಇತರ ಆಸಕ್ತಿದಾಯಕ ಸಂಸ್ಥೆಗಳಿಂದ ಉತ್ತಮ ಸ್ಥಾನಮಾನದ ಭರವಸೆ. ಶಿಕ್ಷಣದಲ್ಲಿನ ಗುಣಮಟ್ಟ ತೃಪ್ತಿಕರವಾಗಿದೆ ಮತ್ತು ನಿರ್ವಹಣೆಗೆ ಅಗತ್ಯವಾದ ಎಲ್ಲಾ ಅಂಶಗಳನ್ನು ಹೊಂದಿದೆ ಎಂದು ಸಾರ್ವಜನಿಕರಿಗೆ ತಿಳಿಯಪಡಿಸುವುದು.
ಮಾನ್ಯತೆಯ ಪರಿಣಾಮ: ಸಂಸ್ಥೆಗಳಿಂದ ಗುಣಮಟ್ಟದ ಸುಧಾರಣೆಗಳ ಉಪಕ್ರಮಗಳನ್ನು ಉತ್ತೇಜಿಸುತ್ತದೆ. ವಿದ್ಯಾರ್ಥಿಗಳ ಗುಣಮಟ್ಟ ಮತ್ತು ಸಂಖ್ಯಾ ದೃಷ್ಟಿಯಿಂದ ದಾಖಲಾತಿಯು ಸುಧಾರಿಸುತ್ತದೆ. ವಿವಿಧ ಮೂಲಗಳಿಂದ ಆದಾಯವನ್ನು ಗಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಪದವೀಧರರ ಉದ್ಯೋಗಾವಕಾಶವನ್ನು ಹೆಚ್ಚಿಸುತ್ತದೆ. ಬಹುರಾಷ್ಟ್ರೀಯವಾಗಿ ಗುರುತಿಸಲು ಅನುಕೂಲ ಕಲ್ಪಿಸುತ್ತದೆ. ಸಂಸ್ಥೆಯಲ್ಲಿ ಉತ್ತಮ ಮತ್ತು ಪರಿಣಾಮಕಾರಿ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸಲು ನೆರವಾಗುತ್ತದೆ
ಇಲ್ಲಿ ವಿದ್ಯಾಭ್ಯಾಸವನ್ನು ಮಾಡಿದ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಾನ್ಯತೆಯನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಇದು ವೇಗವರ್ಧಕವಾಗಿ ಕೆಲಸ ಮಾಡುತ್ತದೆ. ಇಲ್ಲಿ ಕಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ, ಉದ್ಯೋಗಾವಕಾಶಕ್ಕೆ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಔದ್ಯೋಗಿಕ ಕಂಪೆನಿಗಳಲ್ಲಿ ಉತ್ತಮ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡುವ ಉದ್ದೇಶದಿಂದ ವಿವೇಕಾನಂದ ವಿದ್ಯಾವರ್ಧಕ ಸಂಘವು 2001 ರಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿತು. ಈಗ ಈ ಸಂಸ್ಥೆಯು ಕರಾವಳಿ ಭಾಗದ ಉತ್ತಮ ಸಂಸ್ಥೆಯಾಗಿ ಬೆಳೆದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಇಲ್ಲಿ ಪಾಠ, ಪಠ್ಯೇತರ ಚಟುವಟಿಕೆಗಳು, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾನ ಅವಕಾಶವನ್ನು ನೀಡಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಹತ್ತಾರು ರ‍್ಯಾಂಕ್ ಗಳನ್ನು ಗಳಿಸುವುದರ ಜತೆಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದಾರೆ. ಪ್ರತಿ ಮೂರು ವರ್ಷಕ್ಕೊಮ್ಮೆ ಬೃಹತ್ ಯಂತ್ರ ಮೇಳಗಳನ್ನು ಆಯೋಜಿಸುವುದರೊಂದಿಗೆ ದೇಶದ ಬೆನ್ನೆಲುಬಾದ ರೈತರಿಗೆ ಸೂಕ್ತವಾದ ಗುಣಮಟ್ಟದ ಕೃಷಿ ಪರಿಕರಗಳನ್ನು, ಯಂತ್ರಗಳನ್ನು ಪರಿಚಯಿಸಲಾಗುತ್ತದೆ. ಇದಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗುತ್ತದೆ. ಗ್ರಾಮಗಳನ್ನು ದತ್ತು ಪಡೆಯುವ ಮೂಲಕ ಅಲ್ಲಿನ ಸರ್ವಾಂಗೀಣ ಅಭಿವೃದ್ದಿಗೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ವರ್ಷ ಕಾಲೇಜಿನ ಇಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿನಿ ಸಿಂಧೂರ ಸರಸ್ವತಿ ಬಿ ಅವರು ಪ್ರಥಮ ರ‍್ಯಾಂಕ್ ಮತ್ತು 6 ಚಿನ್ನದ ಪದಕಗಳನ್ನು ಗಳಿಸಿಕೊಂಡಿದ್ದಾರೆ. ಅಲ್ಲದೆ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ಸುಬ್ರಮಣ್ಯ ಭಟ್.ಟಿ.ಎಸ್ ಅವರ ವತಿಯಿಂದಲೂ ಬಂಗಾರದ ಪದಕವನ್ನಿತ್ತು ಗೌರವಿಸಲಿದ್ದಾರೆ. ಸಿಂಧೂರ ಸರಸ್ವತಿ ಬಿ ಅವರ ಈ ಸಾಧನೆಗೆ ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಎಲ್ಲಾ ವಿವೇಕಾನಂದ ವಿದ್ಯಾಸಂಸ್ಥೆಗಳ ವತಿಯಿಂದ ಹಾರ್ದಿಕ ಅಭಿನಂದನೆಯನ್ನು ಸಲ್ಲಿಸುತ್ತೇವೆ.
ಎನ್‍ಬಿಎ ಮಾನ್ಯತೆಯಿಂದಾಗಿ ಹೊಸ ಕೋರ್ಸುಗಳನ್ನು ಪ್ರಾರಂಭಿಸಲು ಅವಕಾಶವಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ಎನ್ನುವ ಕೋರ್ಸನ್ನು ಆರಂಭಿಸಲಾಗುವುದು.
ಕರಾವಳಿ ಭಾಗದ ಕೆಲವೇ ಕಾಲೇಜುಗಳಿಗೆ ಎನ್‍ಬಿಎ ಮಾನ್ಯತೆ ದೊರಕಿದ್ದು ಇದರಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಕೂಡಾ ಒಂದು ಎನ್ನುವುದು ಹೆಮ್ಮೆಯ ವಿಚಾರ. ಈ ಮಾನ್ಯತೆಯು ಇನ್ನೂ ಹೆಚ್ಚಿನ ಗುಣಮಟ್ಟದ ಸೇವೆಯನ್ನು ಒದಗಿಸುವುದಕ್ಕೆ ನಮಗೆ ಸ್ಪೂರ್ಥಿಯನ್ನು ನೀಡಿದೆ ಎಂದು ಅವರು ಹೇಳಿದರು.
ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್, ಸಂಚಾಲಕ ರಾಧಾಕೃಷ್ಣ ಭಕ್ತ, ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ, ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button