ವೆನ್ಲಾಕ್ ಈಗ ಸಂಪೂರ್ಣ ಕೋವಿಡ್-19 ಆಸ್ಪತ್ರೆ…

ಮಂಗಳೂರು: ಇಲ್ಲಿನ ವೆನ್ಲಾಕ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್-19 ರೋಗಿಗಳ ಆಸ್ಪತ್ರೆಯನ್ನಾಗಿ ಮಾರ್ಪಾಡುಗೊಳಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶ ನೀಡಿದ್ದಾರೆ.
ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ವೆನ್ಲಾಕ್ ಆಸ್ಪತ್ರೆಯಲ್ಲಿರುವ ಇತರ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿಯೇ ಚಿಕಿತ್ಸೆ ನೀಡಲಾಗುವುದು. ವೆನ್ಲಾಕ್‌ ಆಸ್ಪತ್ರೆಯ 20 ಹಾಸಿಗೆಗಳ ಆಯುಷ್‌ ಕಟ್ಟಡದಲ್ಲಿ ಕೊರೊನಾ ಶಂಕಿತರನ್ನು ದಾಖಲಿಸಿಲಾಗುತ್ತದೆ. ಅವರಲ್ಲಿ ಯಾರಿಗಾದರೂ ಪಾಸಿಟಿವ್‌ ಕಂಡು ಬಂದಲ್ಲಿ ಅವರನ್ನು ಸೂಪರ್‌ ಸ್ಪೆಶಾಲಿಟಿ ಕಟ್ಟಡದ ವಾರ್ಡಿಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಹಾಗೆಯೇ ಈಗಾಗಲೇ ಆಸ್ಪತ್ರೆಯಲ್ಲಿ ಬೇರೆ ಕಾಯಿಲೆಗಳ ಚಿಕಿತ್ಸೆ ಪಡೆಯಲು ಒಳರೋಗಿಗಳಾಗಿ ದಾಖಲಾಗಿರುವ ಸುಮಾರು 218 ರೋಗಿಗಳನ್ನು ಹಂತ ಹಂತವಾಗಿ ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಮೂರು ದಿನಗಳ ಒಳಗಾಗಿ ವರ್ಗಾವಣೆ ಮಾಡಲಾಗುವುದು. ಹೊರರೋಗಿ ಚಿಕಿತ್ಸೆಗಾಗಿ ಬರುವವರನ್ನು ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತದೆ. ಹಂತಹಂತವಾಗಿ 705 ಹಾಸಿಗೆಗಳ ವೆನ್ಲಾಕ್‌ ಆಸ್ಪತ್ರೆಯ ಹಳೆ ಕಟ್ಟಡದ ವಾರ್ಡ್‌ಗಳನ್ನು ಕೊರೊನಾ ಪ್ರಕರಣಗಳನ್ನು ದಾಖಲೆ ಮಾಡಲು ಉಪಯೋಗಿಸಲಾಗುವುದು ಎಂದು ಹೇಳಿದರು.

ಇನ್ನು ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕನೆ ಮಾಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 20 ಹಾಸಿಗೆಯ ಐಸೋಲೇಷನ್‌ ವಾರ್ಡ್‌ಗಳನ್ನು ತೆರೆಯಲಾಗುವುದು. ಇದೇ ರೀತಿ ತಾಲೂಕುಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ತಾಲ್ಲೂಕು ಆಸ್ಪತ್ರೆ ಹಾಗೂ ಸ್ಥಳೀಯ ಆಸ್ಪತ್ರೆಗಳೊಂದಿಗೆ ಸಮನ್ವಯ ಮಾಡಿಕೊಳ್ಳಲಾಗುತ್ತದೆ ಎಂದರು.
ಹಾಗೆಯೇ ವೆನ್ಲಾಕ್‌ ಆಸ್ಪತ್ರೆಯಲ್ಲಿರುವ ವೈದ್ಯರು ಹಾಗೂ ನರ್ಸ್‌ಗಳಿಗೆ ಕೊರತೆ ಇದ್ದಲ್ಲಿ ಖಾಸಗಿ ಆಸ್ಪತ್ರೆಗಳ ನರ್ಸ್‌ಗಳಿಗೆ ತರಬೇತಿ ನೀಡಲು ವೈದ್ಯಕೀಯ ಕಾಲೇಜುಗಳ ಸಹಕಾರ ಪಡೆದುಕೊಳ್ಳಲಾಗುತ್ತದೆ. ವೆನ್ಲಾಕ್‌ ಆಸ್ಪತ್ರೆಯಲ್ಲಿ 52 ವೆಂಟಿಲೇಟರ್‌ಗಳಿದ್ದು , ಹೊಸ ಕಟ್ಟಡದಲ್ಲಿ ಇನ್ನೊಂದು ವಾರದಲ್ಲಿ 100 ವೆಂಟಿಲೇಟರ್‌ಗಳನ್ನು ಅಳವಡಿಸುವಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕರಾದ ಡಾ. ಭರತ್‌ ಶೆಟ್ಟಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಅಪರ ಜಿಲ್ಲಾಧಿಕಾರಿ ರೂಪ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button