ಬಿ.ಸಿ ರೋಡ್ – ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭ…

ಬಂಟ್ವಾಳ: ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪನವರಿಗೆ ಸಮಾಜದ ಮೇಲೆ ಇದ್ದ ಪ್ರೀತಿ, ಅವರು ಸಮಾಜವನ್ನು ತಿದ್ದು ತೀಡಿದ ರೀತಿ ನಮಗೆ ಆದರ್ಶ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಆಚರಣಾ ಸಮಿತಿ ವತಿಯಿಂದ ಫೆ.25 ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಮಾಜ ಸೇವಾ ಸಹಕಾರಿ ಸಂಘ ಇಂದು ಅದೆಷ್ಟೋ ಜನರಿಗೆ ಉದ್ಯೋಗ ನೀಡಿ ಬಡವರಿಗೆ ಪ್ರಯೋಜನವಾಗಿದ್ದರೆ ಅದರ ಹಿಂದೆ ಡಾ. ಅಮ್ಮೆಂಬಳ ಬಾಳಪ್ಪರ ಚಿಂತನೆ ಇದ್ದು ಇಂದು ಮಂಥನವಾಗುತ್ತಿದೆ. ಮುಂದಿನ ಪೀಳಿಗೆಯ ಮಕ್ಕಳಿಗೆ ಅವರ ಸಾಧನೆ ತತ್ವಾದರ್ಶದ ಬಗ್ಗೆ ಅಭಿರುಚಿ ಮೂಡಿಸುವ ಕಾರ್ಯ ಪ್ರತಿ ಮನೆ ಮನೆಯಲ್ಲೂ ಆಗಬೇಕಾಗಿದೆ ಎಂದರು.
ಶಾಸಕ ರಾಜೇಶ್ ನಾಯ್ಕ್ ಬಾಳಪಥ ಎನ್ನುವ ಡಾ. ಅಮ್ಮೆಂಬಳ ಬಾಳಪ್ಪರ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಡಾ. ಬಾಳಪ್ಪ ಅವರ ತತ್ವ ಆದರ್ಶ ಅನುಕರಣೀಯವಾದುದು. ಅವರು ಯಾವತ್ತೂ ಅಧಿಕಾರ, ಅಂತಸ್ತಿನ ಹಿಂದೆ ಹೋಗಿಲ್ಲ, ಬದಲಾಗಿ ತಾನು ನಂಬಿದ ಆದರ್ಶ ತತ್ವವನ್ನು ಬೆಂಬಲಿಸಿದವರು. ಅವರ ಜೀವನಾದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿದಾಗ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತದೆ ಎಂದರು.
ಫ್ಲೆಕ್ಸ್‌ಗಳಲ್ಲಿ ಜನ್ಮ ತಾಳುತ್ತಾರೆ:
ವಿಧಾನಸಭೆಯ ಮಾಜಿ ಮುಖ್ಯ ಸಚೇತಕ ವೈ.ಎಸ್.ವಿ ದತ್ತ ವಿಶೇಷ ಉಪನ್ಯಾಸ ನೀಡಿದರು. ಇಂದು ಮೌಲ್ಯಾಧಾರಿತ ರಾಜಕಾರಣದ ಕುರಿತು ಮಾತನಾಡಿದರೆ, ಅಣಕವಾಡುವ ಸ್ಥಿತಿ ನಿರ್ಮಾಣವಾಗಿದೆ, ಬದಲಾದ ಸನ್ನಿವೇಶದಲ್ಲಿ ನೈಜ ರಾಜಕಾರಣ ಅಧಃಪತನಕ್ಕಿಳಿದಿದ್ದು, ತತ್ವಗಳಿಗೆ ಹೋರಾಡುವವರು ವಿರಳವಾಗಿದ್ದಾರೆ ಎಂದರು. ಹಿಂದೆ ರಾಜಕಾರಣಿಗಳು ಜನಪರ ಚಳವಳಿಗಳ ಮೂಲಕ ಹುಟ್ಟುತ್ತಿದ್ದರು, ಜನರ ಮಧ್ಯೆ ಇದ್ದು, ಅವರ ಕೆಲಸಗಳನ್ನು ಮಾಡುವ ಮೂಲಕ ಬೆಳಕಿಗೆ ಬರುತ್ತಿದ್ದರು. ಆದರೆ ಈಗ ರಾತ್ರೋರಾತ್ರಿ ಫ್ಲೆಕ್ಸ್ ಗಳನ್ನು ರಸ್ತೆ ಬದಿಯಲ್ಲಿ ಹಾಕುವ ಮೂಲಕ ಜನ್ಮ ತಾಳುತ್ತಾರೆ. ಹೊಸ ತಲೆಮಾರಿನ ರಾಜಕಾರಣಿಗಳಿಗೂ ಹಿಂದಿನ ರಾಜಕಾರಣಿಗಳಿಗೂ ಬಹಳ ವ್ಯತ್ಯಾಸವಿದೆ ಎಂದು ಮಾರ್ಮಿಕವಾಗಿ ತಿಳಿಸಿದ ದತ್ತಾ, ಜಯಪ್ರಕಾಶ ನಾರಾಯಣ, ರಾಮ ಮನೋಹರ ಲೋಹಿಯಾರಂಥವರು ತತ್ವಗಳಿಗೆ ಹೋರಾಡಿದವರು. ಡಾ. ಅಮ್ಮೆಂಬಳ ಬಾಳಪ್ಪರಂಥವರು ಮೌಲ್ಯಾಧಾರಿತ ರಾಜಕಾರಣ ಮಾಡಿದವರು. ಹಿಂದೆ ರಾಮಕೃಷ್ಣ ಹೆಗಡೆ ಅವರು ಅಂಥ ರಾಜಕಾರಣ ಪ್ರತಿಪಾದಿಸಿದವರು. ಜವಾಹರಲಾಲ್ ನೆಹರೂ ಮತ್ತು ಲೋಹಿಯಾ ಎದುರುಬದುರಾಗಿ ಲೋಕಸಭೆಯಲ್ಲಿ ಚರ್ಚೆ ನಡೆಸುವ ಸಂದರ್ಭ ಪರಸ್ಪರ ಗೌರವಿಸುತ್ತಿದ್ದರು. ಆದರೆ ಇಂದಿನ ರಾಜಕಾರಣದಲ್ಲಿ ಭಾಷೆ ಹಳಿ ತಪ್ಪಿದೆ ಎಂದು ಖೇದ ವ್ಯಕ್ತಪಡಿಸಿದರು. ಮೌಲ್ಯಾಧಾರಿತ ರಾಜಕಾರಣ ಎಂಬುದು ಈಗ ಅಣಕವಾಡುವ ವಿಚಾರವಾಗಿದೆ. ಈಗಿನ ರಾಜಕಾರಣದಲ್ಲಿ ತಾತ್ವಿಕವಾದ ಆದರ್ಶಗಳಿಲ್ಲ. ಹಿಂದೆ ರಾಜಕೀಯ ಕಡುವೈರಿಗಳೂ ತತ್ವ, ಸಿದ್ಧಾಂತಗಳಿಗಷ್ಟೇ ವಿರೋಧಿಗಳಾಗಿದ್ದರು. ಬಸವಣ್ಣನ ವಚನ ಪ್ರಜಾಪ್ರಭುತ್ವದ ವ್ಯಾಖ್ಯಾನಕ್ಕೆ ಹೋಲುತ್ತದೆ. ನಿಜವಾದ ವ್ಯಕ್ತಿತ್ವ ಬದುಕಿನ ನಡವಳಿಕೆ ಮೂಲಕ ಬರುತ್ತದೆ ಎಂದರು. ತನ್ನ ವಿರುದ್ಧ ಸ್ಪರ್ಧೆಗಿಳಿದವರು ಧರ್ಮಸ್ಥಳ ಮಂಜುನಾಥನ ಆಣೆ ಹಾಕಿಸಿದ್ದನ್ನು ನೆನಪಿಸಿ ರಾಜಕಾರಣಕ್ಕೆ ದೇವರನ್ನೂ ಬಳಸಲಾಗುತ್ತಿದೆ ಎಂದರು.
ಪ್ರಾಧ್ಯಪಕ ಡಾ. ದುಗ್ಗಪ್ಪ ಕಜೆಕಾರ್ ಉಪನ್ಯಾಸ ನೀಡಿದರು. ಪ್ರತಿಷ್ಠಾನದ ಅಧ್ಯಕ್ಷ ಅಮ್ಮೆಂಬಳ ಆನಂದ ಸಭಾಧ್ಯಕ್ಷತೆ ವಹಿಸಿದ್ದರು.
ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ , ಆಚರಣಾ ಸಮಿತಿ ಗೌರವಾಧ್ಯಕ್ಷ ಚಂದಪ್ಪ ಮೂಲ್ಯ, ಸಂಯೋಜಕ ಮಂಜು ವಿಟ್ಲ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳ ಸಾಧಕರಾದ ದಾಮೋದರ ಸಂಚಯಗಿರಿ, ಯೋಧ ಸಂತೋಷ್ ಕುಲಾಲ್ ಸವಿತಾ ಗುಂಡ್ಮಿ ಅವರನ್ನು ಸನ್ಮಾನಿಸಲಾಯಿತು.ಶ್ರೇಷ್ಠ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿದ ಡಾ.ತುಕರಾಂ ಪೂಜಾರಿ ಹಾಗೂ ಡಾ. ಆಶಾಲತಾ ಸುವರ್ಣ ದಂಪತಿಯನ್ನು ಗೌರವಿಸಲಾಯಿತು. ಸಮಿತಿ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಧ್ಯಕ್ಷ ಮಯೂರ್ ಉಲ್ಲಾಳ್ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಮೈಮ್ ರಾಮದಾಸ್ ಅವರಿಂದ ಗೀತ ಗಾಯನ ನಡೆಯಿತು.ಸಮಾಜ ಸೇವಾ ಸಹಕಾರಿ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಭಾ ಕಾರ್ಯಕ್ರಮಕ್ಕಿಂತ ಪೂರ್ವಭಾವಿಯಾಗಿ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಿಂದ ಸ್ಮರ್ಶಾ ಕಲಾ ಮಂದಿರದವರೆಗೆ ಮೆರವಣಿಗೆ ನಡೆಯಿತು.

whatsapp image 2023 02 25 at 7.07.16 pm
whatsapp image 2023 02 25 at 7.07.15 pm (1)
Sponsors

Related Articles

Back to top button