ಸಂವಿಧಾನ ಸಮರ್ಪಕ ಅಂಗೀಕಾರದಿಂದ ಮತೀಯ ಸಾಮರಸ್ಯ ಸುಲಭ -ಡಾ. ಪುರುಷೋತ್ತಮ ಬಿಳಿಮಲೆ….

ಪುತ್ತೂರು: ಭಾರತೀಯರಿಗೆ ಮೊದಲ ಬಾರಿ ಪೌರತ್ವ ನೀಡಿರುವುದೇ ಸಂವಿಧಾನ. ಈ ಸಂವಿಧಾನವನ್ನು ಸರಿಯಾಗಿ ಅಂಗೀಕರಿಸಿದರೆ ಮತೀಯ ಸಾಮರಸ್ಯ ಕಷ್ಟವಲ್ಲ ಎಂದು ದೆಹಲಿ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‍ಯು) ಇದರ ಕನ್ನಡ ವಿಭಾಗದ ಮುಖ್ಯಸ್ಥರಾದ ಸಾಹಿತಿ, ಸಂಶೋಧಕ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಅವರು ಸುವಿಚಾರ ಬಳಗದ ನೇತೃತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಇವುಗಳ ಸಹಯೋಗದಲ್ಲಿ ಮಂಗಳವಾರ ಸಂಜೆ ಪುತ್ತೂರು ಬೈಪಾಸ್‍ನಲ್ಲಿರುವ ಆಶ್ಮಿ ಕಂಫರ್ಟ್ ಸಭಾಗಣದಲ್ಲಿ ನಡೆದ `ಮತೀಯ ಸಾಮರಸ್ಯ ಇಂದಿನ ಅನಿವಾರ್ಯತೆ’ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. `ಮತೀಯ ಸಾಮರಸ್ಯಗಳು ನಮ್ಮಲ್ಲಿ ಹಿಂದಿನಿಂದಲೇ ಬೆಳೆದು ಬಂದಿತ್ತು. ಸಣ್ಣ ಪುಟ್ಟ ಜಗಳಗಳು ನಡೆಯುವುದು ಸಾಮಾನ್ಯವಾಗಿತ್ತು. ಆದರೆ ಇದೀಗ ರಾಜಕೀಯ ಗುಣದಿಂದಾಗಿ ಮತೀಯ ವಿಚಾರಗಳು ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ. ಕೋಮು ಗಲಭೆಗಳು ಎಂಬದು ಕೇವಲ ಹಿಂದೂ ಮುಸ್ಲಿಮರ ನಡುವೆ ಮಾತ್ರ ನಡೆಯುತ್ತಿಲ್ಲ. ಸೋ ಕಾಲ್ಡ್ ಹಿಂದೂಗಳ ನಡುವೆಯೂ ನಡೆಯುತ್ತಿದೆ. ಹಿಂದೂ ಮುಸ್ಲಿಮರ ನಡುವೆ ನಡೆದಂತೆ ಹಿಂದೂ ಅಂತರ್ಜಾತಿ ವಿವಾಹ ನಡೆದಾಗಲೂ ಕೋಮು ಗಲಭೆ ನಡೆದ ನಿದರ್ಶಗಳಿವೆ ಎಂದರು.
ಈ ದೇಶಕ್ಕೆ ಹಿಂದುಗಳು, ಮುಸ್ಲಿಮರು, ಕ್ರಿಶ್ಚನರು, ಜೈನರು, ಬೌದ್ಧರು ಎಲ್ಲರ ಕೊಡುಗೆಯಿದೆ. ಇವೆಲ್ಲವೂ ಸೇರಿಕೊಂಡು ನಮ್ಮ ಸಂಸ್ಕೃತಿ ರೂಪುಗೊಂಡಿದೆ. ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಅಪಾರವಾಗಿದೆ. ಇಲ್ಲಿರುವ ಬಬ್ಬರ್ಯ, ಆಲಿಬೂತಗಳು ಮಸಲ್ಮಾನ್ ದೈವಗಳು. ಆದರೆ ಇದನ್ನು ಆರಾಧಿಸುವವರು ತುಳುವರು. ನಮ್ಮ ಕಷ್ಟಗಳನ್ನು ಪರಿಹರಿಸಲು ಈ ದೈವಗಳೇ ಬೇಕು. ಬಿರಿಯಾನಿಯಲ್ಲಿ ಮುಸ್ಲಿಮರ ಕೊಡುಗೆಯಿದೆ. ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಇಲ್ಲಿನ ಬ್ಯಾರಿಗಳು, ಬ್ರಾಹ್ಮಣರಲ್ಲದ ನಮಗೆ ಶಿಕ್ಷಣ ನೀಡಿರುವ ಬಾಷೆಲ್ ಮಿಷನ್ ಕ್ರಿಶ್ಚನರು ಇವರೆಲ್ಲರನ್ನು ನಮ್ಮವರಲ್ಲ ಎಂದು ಹೇಳುವುದು ಸಾಧ್ಯವೇ ಎಂದು ಪ್ರಶ್ನಿಸಿದರು.
ನಮ್ಮ ದೇಶದಲ್ಲಿ 19568 ಮಾತೃಭಾಷೆಗಳಿವೆ. ಈ ಭಾಷೆಗಳನ್ನು ಬಳಸುವ ಅಷ್ಟೇ ಸಮುದಾಯಗಳಿವೆ. ಅವರೆಲ್ಲರೂ ಒಟ್ಟಿಗೆ ಬದುಕಿದ್ದಾರೆ. ಆದರೆ ಇಂತಹ ಬಹು ಸಂಸ್ಕೃತಿಯನ್ನು ಬಿಟ್ಟು ಏಕ ಸಂಸ್ಕೃತಿಯನ್ನು ಭಾರತದಲ್ಲಿ ಹೇರುವ ಪ್ರಯತ್ನಗಳು ನಡೆಸಲಾಗುತ್ತಿದೆ. ಇದರಿಂದ ನಮ್ಮೊಳಗಿನ ಮತೀಯ ಸಾಮರಸ್ಯಕ್ಕೆ ಧಕ್ಕೆಯಾಗಲಿದೆ. ಒಂದನ್ನು ಸಾಯಿಸಿ ಇನ್ನೊಂದನ್ನು ಬದುಕಿಸುವುದು ನಮ್ಮ ಸಂಸ್ಕೃತಿಯಲ್ಲ. ಇದು ಬಹುಬಣ್ಣದ ರಂಗೋಲಿಯನ್ನು ಬಿಟ್ಟು ಏಕಬಣ್ಣವನ್ನು ಮಾಡಿದಂತಾಗಲಿದೆ ಎಂದರು.
ಭಾರತ ಬಹುಬಣ್ಣದ ರಂಗೋಲಿಯಾಗಿದೆ. ಇಲ್ಲಿ ಬಹುತ್ವನ ನಡುವೆ ಸಾಮರಸ್ಯವಿದೆ. ನಮಗೆ ಎಲ್ಲವನ್ನೂ ಎಲ್ಲರನ್ನೂ ಸ್ವೀಕರಿಸುವ ಗುಣವಿದೆ. ರಾಜಕೀಯ ಕಾರಣಕ್ಕಾಗಿ ಪರಸ್ಪರ ಸಂಶಯ ಪ್ರವೃತ್ತಿ ಬೆಳೆಸಿಕೊಳ್ಳದೆ ಎಲ್ಲರೂ ಸಾಮರಸ್ಯದಿಂದ ಬದುಕುವ ಚಿಂತನೆ ನಡೆಸಬೇಕು ಎಂದರು.
ಉಪನ್ಯಾಸ ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು. ಸುವಿಚಾರ ಬಳಗದ ಪ್ಯಾಟ್ರಿಕ್ ಸಿಪ್ರಿಯಾನ್ ಸ್ವಾಗತಿಸಿದರು. ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ರಫೀಕ್ ದರ್ಬೆ ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button