ಹಸುರಿನ ಅರಸಿಯ ಅರಮನೆ…

ಹಸುರಿನ ಅರಸಿಯ ಅರಮನೆ…

ಸೊಬಗಿನ ನೋಟವ ನೋಡಲು ಬನ್ನಿರಿ
ಹಸುರಿನ ಅರಸಿಯ ಅರಮನೆಗೆ
ಹಸುರಿನ ಬಣ್ಣದ ಸೀರೆಯ ಸುತ್ತಿಹ
ಹದಿನಾರರ ಹರೆಯದ ಸರಸಿಗೆ||ಸೊಬಗಿನ||

ಗಾಳಿಯು ಬೀಸಲು ಸೆರಗನ್ನು ಬೀಸುತ್ತಾ
ಜಗಕೆಲ್ಲ ಉಸಿರನ್ನು ನೀಡುತ್ತಾ
ಜಲವನ್ನು ಹೀರುತ್ತ ಹಸಿರನ್ನು ಚೆಲ್ಲುತ್ತಾ
ಕಣ್ಣಿಗೆ ಮುದವನ್ನು ತುಂಬುತ್ತಾ ||ಸೊಬಗಿನ||

ತನ್ನಯ ಮೊಗವನ್ನು ಮುಕುರದಿ ನೋಡುತ್ತಾ
ಮುಕುಟದ ಅಂದವ ಸವಿಯುತ್ತಾ
ತಂಪಿನ ಗಾಳಿಯು ತಣ್ಣನೆ ಸೋಕಲು
ತನುವೆಲ್ಲ ಕಂಪನ ಕಾಣುತ್ತಾ||ಸೊಬಗಿನ||

ಹಕ್ಕಿಯ ಕಲರವ ಇಂಪನ್ನು ಚೆಲ್ಲಲು
ಎಲೆಗಳು ಶ್ರುತಿಯನ್ನು ಮೀಟಿರಲು
ನೀರಿನ ಅಲೆಗಳು ತಕತಕ ಕುಣಿಯಲು
ಮನದಲ್ಲಿ ಪೆಂಪದು ಮೂಡಿರಲು ||ಸೊಬಗಿನ||

ರಚನೆ:ಡಾ. ವೀಣಾ ಎನ್. ಸುಳ್ಯ

Sponsors

Related Articles

Back to top button