ಸುಳ್ಯದಲ್ಲಿ ಜನರ ಸಂಚಾರವನ್ನು ನಿಯಂತ್ರಿಸಲು ಮತ್ತಷ್ಟು ಬಿಗಿ ಕ್ರಮ….
ಸುಳ್ಯ: ಕೊರೋನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಘೋಷಿಸಲಾಗಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರ ಸಂಚಾರವನ್ನು ನಿಯಂತ್ರಿಸಲು ಇಂದಿನಿಂದ ಮತ್ತಷ್ಟು ಬಿಗಿ ಕ್ರಮವನ್ನು ಕೈಗೊಳ್ಳಲಾಗಿದೆ.
ಇಂದು ನಗರದ ಜಟ್ಟಿಪಳ್ಳ ರಸ್ತೆ, ನಾವೂರು ರಸ್ತೆ, ಗಾಂಧಿನಗರ, ಆಲೆಟ್ಟಿ ರಸ್ತೆ ಗಳಲ್ಲೂ ಬ್ಯಾರಿಕೇಡ್ ಗಳನ್ನು ನಿರ್ಮಿಸಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ವಾಹನಗಳನ್ನು ಅಲ್ಲಿಯೇ ನಿಲ್ಲಿಸಿ ಸುಳ್ಯ ಪೇಟೆಗೆ ನಡೆದು ಹೋಗುವಂತೆ ಸವಾರರಿಗೆ ಹೇಳಲಾಗುತ್ತಿದೆ.
ಸುಳ್ಯ ನಗರದ ಜ್ಯೋತಿ ಸರ್ಕಲ್, ಪೊಲೀಸ್ ಸ್ಟೇಷನ್ ಮುಂಭಾಗ, ಗಾಂಧಿನಗರ ಮಸೀದಿ ಬಳಿ ಮತ್ತು ವಿವೇಕಾನಂದ ಸರ್ಕಲ್ ಬಳಿಯಲ್ಲಿ ಬ್ಯಾರಿಕೇಡ್ ಗಳನ್ನು ನಿರ್ಮಿಸಿ ಪೊಲೀಸ್ ಸಿಬ್ಬಂದಿಗಳನ್ನು ಈ ಹಿಂದೆಯೇ ನಿಯೋಜನೆ ಮಾಡಲಾಗಿತ್ತು. ಪ್ರತಿ ವಾಹನಗಳನ್ನು ಪರಿಶೀಲನೆ ನಡೆಸಿ ವೈದ್ಯಕೀಯ ಅಗತ್ಯತತೆ, ಪಡಿತರ ಮತ್ತಿತರ ಅಗತ್ಯತೆಗಳಿಗೆ ಮಾತ್ರ ವಾಹನಗಳನ್ನು ಬಿಡಲಾಗುತ್ತಿತ್ತು. ನಗರದಾದ್ಯಂತ ಪೊಲೀಸ್ ವಾಹನ ಸಂಚರಿಸಿ ಎಲ್ಲಿಯೂ ಜನ ಮತ್ತು ವಾಹನಗಳ ಗುಂಪು ಸೇರದಂತೆ ಎಚ್ಚರ ವಹಿಸಲಾಗುತ್ತಿದೆ. ಅನಗತ್ಯವಾಗಿ ತಿರುಗಾಟ ನಡೆಸುವ ಖಾಸಗೀ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಗಡಿ ಪ್ರದೇಶದ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದ್ದು ತಾಲೂಕಿನ ಇತರ ಭಾಗಗಳಿಂದ ಸುಳ್ಯಕ್ಕೆ ಬರುವ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದ್ದು ತೀರಾ ಅಗತ್ಯ ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ.