ಸುಳ್ಯ-ಬಡ್ಡಡ್ಕ, ಸುಳ್ಯ-ಕೋಲ್ಚಾರು ರಸ್ತೆ ದುರಸ್ತಿ ಆಗ್ರಹಿಸಿ ಪ್ರತಿಭಟನೆ, ರಸ್ತೆ ತಡೆ….

ಸುಳ್ಯ: ಸುಳ್ಯ-ಬಂದಡ್ಕ, ಸುಳ್ಯ-ಪಾಣತ್ತೂರು ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಸುಳ್ಯ-ಕೋಲ್ಚಾರು, ಸುಳ್ಯ-ಆಲೆಟ್ಟಿ-ಬಡ್ಡಡ್ಕ ರಸ್ತೆಯು ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ದುಸ್ತರವಾಗಿರುವುದನ್ನು ಖಂಡಿಸಿ ಸಾರ್ವಜನಿಕರು ನಾಗಪಟ್ಟಣ ಸೇತುವೆಯ ಬಳಿ ನ. 21 ರಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನ್ನುದ್ಧೇಶಿಸಿ ಮಾತನಾಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಈ ಭಾಗದ ರಸ್ತೆಯು ತೀರಾ ಹದಗಟ್ಟಿದ್ದು, ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ರಸ್ತೆಯ ನಿರ್ವಹಣೆ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕೆಲಸ ಮಾಡಿಸಬೇಕಾದುದು ಜನಪ್ರತಿನಿಧಿಗಳ ಜವಾಬ್ದಾರಿ. ಆದರೆ ಜನಪ್ರತಿನಿಧಿಗಳು ಅದನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದರು.
ನಗರ ಪಂಚಾಯಿತಿ ಸದಸ್ಯ ಎಂ. ವೆಂಕಪ್ಪ ಗೌಡ ಮಾತನಾಡಿ ಮೂಲಭೂತ ಸೌಕರ್ಯದಿಂದ ವಂಚಿತರಾದಾಗ ರಾಜಕೀಯ ಬದಿಗಿಟ್ಟು ಒಗ್ಗಟ್ಟಾಗಿ ಸೇರಿ ಹೋರಾಟ ನಡೆಸಬೇಕು. ಮುಂದಿನ 15 ದಿನದ ಒಳಗೆ ದುರಸ್ತಿ ಮಾಡದಿದ್ದರೆ ನಗರ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಹೆಳಿದರು.
ಮುಂದಿನ 15 ದಿನದ ಒಳಗೆ ನ.ಪಂ.ವ್ಯಾಪ್ತಿಯ ಕಲ್ಲುಮುಟ್ಲು ತಿರುವುನಿಂದ ಸೇತುವೆಯ ತನಕ ತೇಪೆ ಕಮಗಾರಿ ಕೆಲಸ ಮಾಡಲಾಗುವುದು ಎಂದು ನಗರ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಮತ್ತಡಿ ತಿಳಿಸಿದರು. ಅದಕ್ಕೆ ವಿರೋಧಿಸಿದ ಪ್ರತಿಭಟನಾಕರರು ಒಂದು ವಾರದ ಒಳಗೆ ತೇಪೆ ಕಾಮಗಾರಿ ನಡೆಸಿ ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಎಸ್.ಎನ್.ಹುಕ್ಕೇರಿ ಮಾತನಾಡಿ ಆಲೆಟ್ಟಿ ಬಡ್ಡಡ್ಕ ರಸ್ತೆಗೆ 5 ಲಕ್ಷ ಅನುದಾನದಲ್ಲಿ ತುರ್ತು ತೇಪೆ ಕಾಮಗಾರಿಯನ್ನು ಮಾಡುತ್ತೇವೆ. ಅಲ್ಲದೆ ರಸ್ತೆಯಲ್ಲಿ ಡಾಮರೀಕರಣಕ್ಕೆ 25 ಲಕ್ಷದ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾಗಪಟ್ಟಣ ಸೇತುವೆ ದುರಸ್ಥಿಗೆ 60 ಲಕ್ಷದ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿಸಿದರು. ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಣ್ಣೇ ಗೌಡ ಮಾತನಾಡಿ ನಾರ್ಕೋಡಿನಿಂದ ಕರ್ನಾಟಕದ ಗಡಿಭಾಗ ಕನ್ನಾಡಿತೋಡುವರೆಗೆ ಲೋಕೋಪಯೋಗಿ ರಸ್ತೆ ಅಭಿವೃದ್ಧಿಗೆ ಒಟ್ಟು 12.16 ಕೋಟಿ ಅನುದಾನ ಬಿಡುಗಡೆ ಆಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ 10.50 ಕೋಟಿ, ಬಜೆಟ್ ಅನುದಾನ 75 ಲಕ್ಷ ಮತ್ತು ಬಾರ್ಪಣೆಯಲ್ಲಿ ಸೇತುವೆ ನಿರ್ಮಾಣಕ್ಕೆ ನಬಾರ್ಡ್ ಯೋಜನೆಯಡಿ 91 ಲಕ್ಷ ಬಿಡುಗಡೆ ಆಗಿದೆ. ಮಳೆ ಬಿಟ್ಟ ಕೂಡಲೇ ರಸ್ತೆ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದರು.
ಆಲೆಟ್ಟಿ ಗ್ರಾ.ಪಂ. ಸದಸ್ಯರಾದ ಗೀತಾ ಕೋಲ್ಚಾರ್, ಜಯಂತಿ ಕೂಟೇಲು, ಯೂಸುಫ್ ಅಂಜಿಕ್ಕಾರ್, ಮಾಜಿ ಉಪಾಧ್ಯಕ್ಷ ಹರೀಶ್ ಕೊಯಿಂಗಾಜೆ, ನ.ಪಂ.ಸದಸ್ಯರಾದ ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ಮಾಜಿ ಸದಸ್ಯ ಕೆ.ಎಂ.ಮುಸ್ತಪಾ, ಪ್ರಮುಖರಾದ ತೇಜುಕುಮಾರ್ ಬಡ್ಡಡ್ಕ, ಆರ್.ಕೆ.ಮಹಮ್ಮದ್, ಧರ್ಮಪಾಲ ಕೊಯಿಂಗಾಜೆ, ಬಾಪೂ ಸಾಹೇಬ್, ದಾಮೋದರ ಗೌಡ ನಾರ್ಕೋಡು, ಚಂದ್ರಕಾಂತ ನಾರ್ಕೋಡು, ಸತ್ಯಕುಮಾರ್ ಆಡಿಂಜ, ಲೋಲಜಾಕ್ಷ ಭೂತಕಲ್ಲು, ರಾಧಾಕೃಷ್ಣ ಪರಿವಾರಕಾನ, ಮೂಸಕುಂಞ ಪೈಂಬೆಚ್ಚಾಲು ಮತ್ತಿತರರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button