ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷೆ ಯಶೋಧ ಬಿ‌. ನಿಧನ…

ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿದ್ದ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷೆ ಯಶೋಧ ಬಿ‌. ಅವರು ನಿನ್ನೆ ರಾತ್ರಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ನಿನ್ನೆ ಏರುಪೇರು ಉಂಟಾಯಿತು ಎಂಬ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸಿದೆ ನಿನ್ನೆ ರಾತ್ರಿ ವೇಳೆ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
*ಪುರಸಭಾ ಅಧ್ಯಕ್ಷೆ-ಉಪಾಧ್ಯಕ್ಷೆಯಾಗಿ ಅಧಿಕಾರ ನಡೆಸಿದ ಮಹಿಳಾ ಜನಪ್ರತಿನಿಧಿ ಯಶೋಧ ಬಿ.*
ಯಶೋಧ ಬಿ. ಅವರು ಎರಡು ಬಾರಿ ಬಿಜೆಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಪುರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
ಪುರಸಭಾ ಸದಸ್ಯರಾಗಿ ಆಯ್ಕೆಯಾದ ಪ್ರಥಮ‌ ಅವಧಿಯಲ್ಲಿ ಇವರು ಪುರಸಭಾ ಉಪಾಧ್ಯಕ್ಷೆಯಾಗಿಯೂ ಎರಡನೇ ಬಾರಿ ಸದಸ್ಯರಾಗಿ ಆಯ್ಕೆಯಾದ ವೇಳೆ ಅಧ್ಯಕ್ಷೆ ಯಾಗಿಯೂ ಪುರಸಭೆಯಲ್ಲಿ ಆಡಳಿತ ಮಾಡಿದ ಮಹಿಳಾ ಜನಪ್ರತಿನಿಧಿ.
ಎರಡು ಬಾರಿಯೂ ಇವರು ಭಂಡಾರಿ ಬೆಟ್ಟು ಕ್ಷೇತ್ರದಿಂದ ಸ್ಪರ್ಧಿಸಿ ಸದಸ್ಯರಾಗಿ ಚುನಾಯಿತರಾಗಿದ್ದರು.
2001 ರಲ್ಲಿ ಪ್ರಥಮ ಅವಧಿಗೆ ಇವರು ಮಹಿಳಾ ಮೀಸಲಾತಿ ಆಯ್ಕೆಯಾಗಿ ಉಪಾಧ್ಯಕ್ಷೆ ಪಟ್ಟ ಅಲಂಕರಿಸಿದರೆ ಎರಡನೇ ಅವಧಿಯಲ್ಲಿ 2008ರಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಅಧ್ಯಕ್ಷೆಯಾಗಿ ಮಿಂಚಿದರು. ಜೊತೆಗೆ ಜಿಲ್ಲಾ ಮಹಿಳಾ ಮೋರ್ಚಾದಲ್ಲಿ, ಬಂಟ್ವಾಳ ಕ್ಷೇತ್ರ ಬಿಜೆಪಿಯಲ್ಲಿ ಸಕ್ರೀಯರಾಗಿದ್ದುಕೊಂಡು ಪಕ್ಷ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.

ಯಶೋಧ ಬಿ. ಅವರು ಕುಲಾಲ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಯನ್ನು ವಹಿಸಿಕೊಂಡು ಸಮರ್ಥವಾಗಿ ನಿರ್ವಹಿಸಿದವರು.
ಪುತ್ತೂರು ಕುಂಬಾರರ ಗುಡಿಕೈಗಾರಿಕೆ ಸಂಘ.ನಿ.ಇದರ ಮಾಜಿ ನಿರ್ದೇಶಕರಾಗಿಯೂ ಕೆಲಸ ಮಾಡಿದವರು. ಉದ್ಯಮಿ ಕಲ್ಲಡ್ಕ ಕೃಷ್ಣಪ್ಪ ಅವರ ಪತ್ನಿಯಾಗಿರುವೆ ಯಶೋದಾ ಓರ್ವ ಮಗ ಮತ್ತು ಮಗಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮಾಜಿ ಪುರಸಭಾ ಅಧ್ಯಕ್ಷೆ ಯಶೋಧ ಅವರ ಸಾವಿಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬಂಟ್ವಾಳ ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ನಾಗರಾಜ ಶೆಟ್ಟಿ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button