ರಂಗ ವಿಹಾರ – 50: ಸುವರ್ಣ ಸಂಪುಟ….ಕರಾವಳಿ ಕಲಾ ವೈವಿಧ್ಯಗಳ ಆಡುಂಬೊಲ: ಡಾ.ಪ್ರಭಾಕರ ಜೋಶಿ…

ಮಂಗಳೂರು: ‘ನಾಡಿನ ಕಲೆ,ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ವೇದಿಕೆ ಒದಗಿಸುವ ಸಂಘ-ಸಂಸ್ಥೆಗಳ ಜತೆಗೆ ಮಾಧ್ಯಮ ಕ್ಷೇತ್ರವೂ ವಿಸ್ತಾರಗೊಂಡಿದೆ. ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವೈಶಿಷ್ಟ್ಯವೂ ಹೌದು. ಇಲ್ಲಿ ರಂಗ ಕಲಾವಿದರಿಗೆ ಕೊರತೆಯಿಲ್ಲ; ಕನ್ನಡ-ತುಳು ಅಲ್ಲದೆ ಬೇರೆ ಭಾಷೆಯನ್ನಾಡುವ ಮಂದಿಯೂ ನಮ್ಮಲ್ಲಿ ಸಾಂಸ್ಕೃತಿಕವಾಗಿ ಸಕ್ರಿಯರು’ ಎಂದು ವಿಶ್ರಾಂತ ಪ್ರಾಚಾರ್ಯ ಹಾಗೂ ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ಹೇಳಿದ್ದಾರೆ.
ನಮ್ಮ ಕುಡ್ಲ ವಾಹಿನಿಯ ‘ರಂಗ ವಿಹಾರ’ ಕರಾವಳಿಯ ಸಾಂಸ್ಕೃತಿಕ ಜಗತ್ತಿನ ಅನಾವರಣ ನೇರ ಪ್ರಸಾರ ಕಾರ್ಯಕ್ರಮದ ಐವತ್ತರ ಸಂಭ್ರಮಾಚರಣೆ ‘ಸುವರ್ಣ ಸಂಪುಟ’ ಸಮಾರಂಭದಲ್ಲಿ 50 ಸಂಚಿಕೆಗಳ ಸಿಂಹಾವಲೋಕನ ಚಿತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ‘ಕರಾವಳಿ ಪ್ರದೇಶ ಕಲಾ ವೈವಿಧ್ಯಗಳ ಆಡುಂಬೊಲ. ಇಲ್ಲಿನ ವಿವಿಧ ಪ್ರಕಾರದ ಕಲಾವಿದರು ಮತ್ತು ರಂಗ ಚಟುವಟಿಕೆಗಳಿಗೆ ಸುದ್ದಿ ಮಾಧ್ಯಮಗಳು ಮತ್ತು ಸ್ಥಳೀಯ ವಾಹಿನಿಗಳು ಬೆನ್ನೆಲುಬಾಗಿ ನಿಂತಿವೆ’ ಎಂದವರು ನುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ದೀಫೋಜ್ವಲನೆಗೈದು ಸಮಾರಂಭವನ್ನು ಉದ್ಘಾಟಿಸಿದರು.
ರಂಗನಟಿಗೆ ಸಮ್ಮಾನ:
ಈ ಬಾರಿಯ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ರಂಗನಟಿ‌ ಮತ್ತು ಸಿನಿಮಾ ಕಲಾವಿದೆ ಸರೋಜಿನಿ ಎಸ್.ಶೆಟ್ಟಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯ್ತು. ಲಕುಮಿ ಹಾಗೂ ಶ್ರೀಲಲಿತೆ ತಂಡದ ಸಂಚಾಲಕ ಕಿಶೋರ್ ಡಿ.ಶೆಟ್ಟಿ ಮತ್ತು ನೂಪುರ ಸಂಗೀತ – ನೃತ್ಯ ಅಕಾಡೆಮಿ ನಿರ್ದೇಶಕಿ ಸುಲೋಚನ ವಿ.ಭಟ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
‘ರಂಗ ವಿಹಾರ’ ದ ಕಾರ್ಯಕ್ರಮ ನಿರ್ವಾಹಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಸ್ತಾವನೆಗೈದು ಸ್ವಾಗತಿಸಿದರು. ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ ಅತಿಥಿಗಳನ್ನು ಗೌರವಿಸಿದರು. ಆಳ್ವಾಸ್ ಆಯುರ್ವೇದ ‌ವಿದ್ಯಾರ್ಥಿನಿ ನಮೃತಾ ಕುಲಾಲ್ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮ ಸಂಯೋಜಕಿ ಸುರೇಖಾ ಶೆಟ್ಟಿ ವಂದಿಸಿದರು.

Sponsors

Related Articles

Back to top button