ಏಳದೆ ಮಂದಾರ ರಾಮಾಯಣದಲ್ಲಿ ಕಲಾವಿದರ ಸಮ್ಮಾನ…

ಮೂಡಬಿದಿರೆ: ತುಳು ವರ್ಲ್ಡ್ ಮಂಗಳೂರು, ಧವಳತ್ರಯ ಜೈನ ಕಾಶಿ ಟ್ರಸ್ಟ್ ಮೂಡಬಿದಿರೆ, ತುಳುಕೂಟ ಬೆದ್ರ ಹಾಗೂ ಮಂದಾರ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ 2022 ಜುಲೈ 31 ರಿಂದ ಆಗಸ್ಟ್ 6 ರ ವರೆಗೆ ಮೂಡಬಿದಿರೆ ಜೈನಮಠದ ಸ್ವಸ್ತಿ ಶ್ರೀ ಭಟ್ಟಾರಕ ಸಭಾಭವನದಲ್ಲಿ ‘ಏಳದೆ ಮಂದಾರ ರಾಮಾಯಣ: ಸುಗಿಪು-ದುನಿಪು’ ಸಪ್ತಾಹ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ತುಳು ಮಹಾಕಾವ್ಯದ ವಾಚನ – ಪ್ರವಚನಗಳನ್ನು ನಡೆಸಿಕೊಟ್ಟ ಕಲಾವಿದ – ವಿದ್ವಾಂಸರನ್ನು ಪ್ರತಿದಿನದ ಸಭೆಯಲ್ಲಿ ಸನ್ಮಾನಿಸಲಾಯ್ತು.
ಸಪ್ತಾಹ ಮಂಗಳಾಚರಣೆ:
ಕೊನೆಯ ದಿನ ಜರಗಿದ ‘ಏಳದೆ ಮಂಗಳಾಚರಣೆ’ ಯಲ್ಲಿ ತುಳು ರಾಮಾಯಣದ ‘ಉತ್ತರ ಕಾಂಡ’ ಭಾಗದಲ್ಲಿ ಮೂರು ಸರ್ಗಗಳನ್ನು ಆರಿಸಿಕೊಳ್ಳಲಾಗಿತ್ತು. ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರ ಕಾವ್ಯದ ಕೊನೆಯ ಮಸಣದ ಕತ್ತಲೆ, ಬದ್ ಕ್ ದ ಬೊಲ್ಪು ಮತ್ತು ಪರಬೂಡುಗು ಪೊಸ ಬೊಲ್ಪು ಅಧ್ಯಾಯಗಳನ್ನು ಯಕ್ಷಗಾನ ಅರ್ಥಧಾರಿ ಮತ್ತು ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನಿಸಿದರು. ಹರಿದಾಸ ತೋನ್ಸೆ ಪುಷ್ಕಳ ಕುಮಾರ್ ಮತ್ತು ಭಾಗವತ ಪ್ರಶಾಂತ್ ರೈ ಪುತ್ತೂರು ವಾಚನ ಮಾಡಿದರು. ಕಲಾವಿದ ಚಂದ್ರಶೇಖರ ಗುರುವಾಯನಕೆರೆ ಮದ್ದಳೆಯಲ್ಲಿ ಸಹಕರಿಸಿದರು‌. ಈ ಕಾರ್ಯಕ್ರಮದಲ್ಲಿ ಮಂದಾರ ರಾಮಾಯಣ ಕನ್ನಡ ಕಾವ್ಯದ ‘ಬದುಕಿನ ಬೆಳಕು’ ಭಾಗವನ್ನು ಬಳಸಿಕೊಂಡು ಪ್ರವಚನಕಾರರು ಸಾಂದರ್ಭಿಕವಾಗಿ ಕನ್ನಡದಲ್ಲಿಯೂ ವ್ಯಾಖ್ಯಾನ ನೀಡಿದರು.
ಮೂಡಬಿದಿರೆ ಜೈನಮಠದ ಸ್ವಸ್ತಿ ಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಕಲಾವಿದರನ್ನು ಸನ್ಮಾನಿಸಿದರು. ಡಾ. ಹರಿಕೃಷ್ಣ ಪುನರೂರು, ಡಾ.ಎಂ.ಪ್ರಭಾಕರ ಜೋಶಿ, ಶ್ರೀಪತಿ ಭಟ್ ಮೂಡಬಿದಿರೆ, ದರ್ಣಪ್ಪ ಶೆಟ್ಟಿ ಪೂವಳ ಮುಖ್ಯ ಅತಿಥಿಗಳಾಗಿದ್ದರು. ತುಳು ವರ್ಲ್ಡ್ ಅಧ್ಯಕ್ಷ ಡಾ.ರಾಜೇಶ್ ಆಳ್ವ ಸನ್ಮಾನಿತರನ್ನು ಪರಿಚಯಿಸಿ ಅಭಿನಂದಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಡಾ.ಮಂದಾರ ರಾಜೇಶ್ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ತುಳುಕೂಟ ಬೆದ್ರದ ಚಂದ್ರಹಾಸ ದೇವಾಡಿಗ ವಂದಿಸಿದರು. ಮಂದಾರ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಮೋದ್ ಸಪ್ರೆ, ಸಂಘಟಕರಾದ ಮಾಧವ ಭಂಡಾರಿ, ಭಾಸ್ಕರ ಕೆ., ಧನಕೀರ್ತಿ ಬಲಿಪ, ಶಾರದಾಮಣಿ ಸಹಕರಿಸಿದರು.

Sponsors

Related Articles

Back to top button