ಅಳಿಕೆ ಟ್ರಸ್ಟ್‌ನ ಯು. ಗಂಗಾಧರ ಭಟ್ ಇನ್ನಿಲ್ಲ…
ವಿಟ್ಲ: ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷ ಯು. ಗಂಗಾಧರ ಭಟ್ (90) ಅಲ್ಪಕಾಲದ ಅಸೌಖ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗಿನ ಜಾವ ನಿಧನರಾಗಿದ್ದಾರೆ.
ಸತ್ಯಸಾಯಿ ಬಾಬಾ ಅವರ ಅನನ್ಯ ಭಕ್ತರಾಗಿದ್ದ ಅವರು ಮಡಿಯಾಲ ನಾರಾಯಣ ಭಟ್ ಅವರ ಜತೆಗೆ ಅಳಿಕೆ ಹಾಗೂ ಮುದ್ದೇನಹಳ್ಳಿ ವಿದ್ಯಾಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದರು. ತ್ಯಾಗ ಜೀವಿಯಾಗಿದ್ದ ಅವರು 1977 ರಿಂದ ಇಲ್ಲಿಯ ತನಕ ಸುಮಾರು 43 ವರ್ಷಗಳ ಕಾಲ ಟ್ರಸ್ಟ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಅಳಿಕೆ ಶ್ರೀ ಸತ್ಯಸಾಯಿ ಲೋಕಾ ಸೇವಾ ಟ್ರಸ್ಟ್ ಅಧ್ಯಕ್ಷ ಯು. ಗಂಗಾಧರ ಭಟ್ ಅವರ ನಿಧನಕ್ಕೆ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂತಾಪ ವ್ಯಕ್ತಪಡಿಸಿ ಬಿ.ಸಿ.ರೋಡಿನಲ್ಲಿ ಶೃದ್ಧಾಂಜಲಿ ಅರ್ಪಿಸಲಾಯಿತು.
ಕ.ಸಾ.ಪ ಅಧ್ಯಕ್ಷ ಕೆ. ಮೋಹನ್ ರಾವ್ ಸಂತಾಪ ಸೂಚಿಸಿ ಅಳಿಕೆ ಗಂಗಾಧರ ಭಟ್ಟರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾಗಿ ಮಾರ್ಗದರ್ಶನ ಮಾಡಿದ್ದರು. ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಸಮ್ಮೇಳನಗಳನ್ನು ಅಳಿಕೆಯಲ್ಲಿ ನಡೆಸುವ ಮೂಲಕ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಯಾಹ ನೀಡುತ್ತಿದ್ದರು. ಸಾಯಿ ಬಾಬಾ ರವರ ಭಕ್ತರಾಗಿ ತ್ಯಾಗ ಜೀವಿಯಾಗಿ ಅಳಿಕೆ ಮತ್ತು ಮುದ್ದೇನ ಹಳ್ಳಿಯಲ್ಲಿ ವಿದ್ಯಾ ಸಂಸ್ಥೆಯನ್ನು ನಡೆಸುವ ಮೂಲಕ ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಮುಂದಾಳು ಆಗಿ ಆದರ್ಶ ಜೀವನ ನಡೆಸಿದ್ದಾರೆ ಎಂದರು.
ಶ್ರೀ ಶಂಕರ ಪತ್ತಿನ ಸಹಕಾರ ಸಂಘ ಮೆಲ್ಕಾರ್ ಪಾಣೆಮಂಗಳೂರು ಇದರ ಅಧ್ಯಕ್ಷ , ಧಾರ್ಮಿಕ ಮುಖಂಡ ಕೈಯೂರು ನಾರಾಯಣ ಭಟ್ ಇವರು ಅಳಿಕೆ ಗಂಗಾಧರ ಭಟ್ ಅವರ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿ, ಓರ್ವತ್ಯಾಗ ಜೀವಿ- ಶೈಕ್ಷಣಿಕ ಮುಂದಾಳುವನ್ನು ಕಳೆದುಕೊಂಡಂತಾಗಿದೆ ಎಂದು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಕ.ಸಾಪ. ನಿಟಕ ಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಪದಾಧಿಕಾರಿಗಳಾದ ಕೊಳಕೆ ಗಂಗಾಧರ ಭಟ್ ,ನಾಗವೇಣಿ ಮಂಚಿ, ಶಿವಶಂಕರ್ ಸಂತಾಪ ಸೂಚಿಸಿದರು.