ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳ ತಿದ್ದುಪಡಿ – ಆದೇಶ ಹಿಂಪಡೆಯುವಂತೆ ಶಾಸಕರ ಮಂಜುನಾಥ ಭಂಡಾರಿ ಒತ್ತಾಯ…

ಮಂಗಳೂರು: ರಾಜ್ಯ ಸರಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಯ ಮೂಲಕ ಆದೇಶವೊಂದನ್ನು ಪಂಚಾಯತ್ ಗಳಿಗೆ ರವಾನಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಧ್ಯಕ್ಷರ ಹಾಗೂ ಪಂಚಾಯತ್ ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಿ ಗ್ರಾಮಸ್ವರಾಜ್ಯದ ಆಶಯಗಳಿಗೆ ಕೊಡಲಿಯೇಟು ನೀಡಿದ್ದಾರೆ ಎಂದು ಶಾಸಕರಾದ ಶ್ರೀ ಮಂಜುನಾಥ ಭಂಡಾರಿಯವರು ಆರೋಪಿಸಿದ್ದಾರೆ.
ಸರ್ಕಾರವು ಈ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ನೀಡಿರುವ ಆರ್ಥಿಕ ವ್ಯವಹಾರಗಳಿಗೆ ಸಹಿ ಮಾಡುವ ಅಧಿಕಾರವನ್ನು ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಕೆಲವು ಪ್ರಕರಣಗಳಿಗೆ ತಿದ್ದುಪಡಿ ಮಾಡುವ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷರ ಮತ್ತು ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಿದೆ. ಕೆಲ ಗ್ರಾಮ ಪಂಚಾಯತಿಗಳಲ್ಲಿ ಸಾಮಾನ್ಯ ಸಭೆ ಸಕಾಲದಲ್ಲಿ ನಡೆಯದ ನೆಪ ಮುಂದಿರಿಸಿ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ವಿತರಿಸಬೇಕಾದ ಕಟ್ಟಡ ಪರವಾನಿಗೆ, ಕಾರ್ಖಾನೆ ಸ್ಥಾಪಿಸಲು ಅನುಮತಿ ನೀಡಲು, ಹೋಟೇಲು/ಅಂಗಡಿಗಳಿಗೆ ಪರವಾನಿಗೆ ನೀಡುವ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 64ರಿಂದ 70ಕ್ಕೆ ತಿದ್ದುಪಡಿ ಮೂಲಕ ಸದ್ರಿ ಪ್ರಮಾಣ ಪತ್ರಗಳಿಗೆ ಸಾಮಾನ್ಯ ಸಭೆ ಅನುಮೋದನೆ ಇಲ್ಲದೆ ನೇರವಾಗಿ ಪಿಡಿಒಗಳು ವಿತರಿಸಿ ಮುಂದಿನ ಸಾಮಾನ್ಯ ಸಭೆಗೆ ಮಾಹಿತಿ ಒದಗಿಸಲು ಆದೇಶಿಸಲಾಗಿದೆ. ಹಾಗೆಯೇ 9/11 ಮತ್ತು 11ಬಿ, ನಿರಾಕ್ಷೇಪಣಾ ಪತ್ರವನ್ನೂ ಸಾಮಾನ್ಯ ಸಭೆ ಅನುಮೋದನೆ ಇಲ್ಲದೆ ನೇರವಾಗಿ ಪಿಡಿಒಗಳು ವಿತರಿಸಿ ಮುಂದಿನ ಸಾಮಾನ್ಯ ಸಭೆಗೆ ಮಾಹಿತಿ ಒದಗಿಸಲು ಆದೇಶಿಸಲಾಗಿದೆ. ಇದು ಪ್ರಜಾಪ್ರಭುತ್ವದ ಬುಡಕ್ಕೆ ಕೊಡಲಿ ಏಟು ಹಾಕಿದಂತಾಗಿದೆ ಹಾಗೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಚುನಾಯಿತ ಜನಪ್ರತಿನಿಧಿಗಳ ಕತ್ತು ಹಿಸುಕಿದಂತಾಗಿದೆ. 2006ನೇ ಇಸವಿಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ ಕಾಯ್ದೆಗೆ ತಂದ ತಿದ್ದುಪಡಿಯ ಆಧಾರದ ಮೇಲೆ ಗ್ರಾಮ ಪಂಚಾಯತಿಯ ಹಣಕಾಸಿನ ವ್ಯವಹಾರವನ್ನು ಸರ್ಕಾರ ಅಧಿಸೂಚಿಸುವ ಅಧಿಕಾರಿ ಅಥವಾ ಪ್ರಾಧಿಕಾರ ನಿರ್ವಹಿಸಲು ಇರುವ ಉಪಬಂಧವಿದ್ದು ಅಧಿಸೂಚನೆಯ ಮೂಲಕ ಅಧ್ಯಕ್ಷರು ಮತ್ತು ಪಿಡಿಒಗೆ ಜಂಟಿಯಾಗಿ ನಿರ್ವಹಿಸಲು ನೀಡಿದ್ದ ಅವಕಾಶವನ್ನು ಹಿಂಪಡೆಯಲಾಗಿದೆ.
ಕೆಲ ಅಧ್ಯಕ್ಷರು ಯೋಜನೆಗಳ ಬಿಲ್ಲು ಪಾವತಿಯನ್ನು ವಿಳಂಬಿಸುವುದನ್ನು ಮತ್ತು ಚುನಾಯಿತ ಜನಪ್ರತಿನಿಧಿಗಳು ಹಣಕಾಸಿನ ವ್ಯವಹಾರಕ್ಕೆ ಉತ್ತರದಾಯಿತ್ವ ಹೊಂದಿಲ್ಲದಿರುವುದನ್ನು ನೆಪವಾಗಿರಿಸಿ ಗ್ರಾಮ ಪಂಚಾಯತಿಯ ಹಣಕಾಸಿನ ವ್ಯವಹಾರವನ್ನು ಪಿಡಿಓ ಮತ್ತು ಲೆಕ್ಕ ಸಹಾಯಕರಿಗೆ ಜಂಟಿಯಾಗಿ ನೀಡಲಾಗಿದೆ. ಇದರಿಂದ ಭ್ರಷ್ಟಾಚಾರ ಇನ್ನಷ್ಟು ಹೆಚ್ಚಾಗಲಿದೆ.
ಆದ್ದರಿಂದ ಅಧ್ಯಕ್ಷರ ಹಾಗೂ ಪಂಚಾಯತ್ ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಿ ಗ್ರಾಮ ಸ್ವರಾಜ್ಯದ ಆಶಯಗಳಿಗೆ ಕೊಡಲಿಯೇಟು ನೀಡಿರುವ ಈ ತಿದ್ದುಪಡಿಗಳನ್ನು ರಾಜ್ಯ ಸರ್ಕಾರವು ಸರ್ಕಾರ ಈ ಕೂಡಲೇ ಇದನ್ನು ಹಿಂದಕ್ಕೆ ಪಡೆಯಬೇಕೆಂದು ಸ್ಥಳೀಯ ಜನಪ್ರತಿನಿಧಿಗಳ ಪ್ರತಿನಿಧಿಯಾಗಿ ಮಂಜುನಾಥ ಭಂಡಾರಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು. ಈ ಬಗ್ಗೆ ಇತರೆ ಸ್ಥಳೀಯ ಸ್ಥಳೀಯ ಸಂಸ್ಥೆಯನ್ನು ಪ್ರತಿನಿಧಿಸುವ ಶಾಸಕರೊಂದಿಗೆ ಸಮಾಲೋಚಿಸಿ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ರೂಪಿಸಲಾಗುವುದು ಎಂದು ಶಾಸಕರಾದ ಶ್ರೀ ಮಂಜುನಾಥ ಭಂಡಾರಿ ಅವರು ತಿಳಿಸಿರುತ್ತಾರೆ.

Sponsors

Related Articles

Back to top button