ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದಿಂದ ‘ಅಮೃತ ಸಾಂಸ್ಕೃತಿಕ ಸಂವಹನ’…
'ರಾಷ್ಟ್ರ ಜಾಗೃತಿಯ ಕಾರ್ಯಕ್ರಮಗಳಿಂದ ಭಾವೈಕ್ಯತೆ': ಡಾ. ಶಿವಪ್ರಕಾಶ್...
ಮಂಗಳೂರು: ‘ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯ ವಿಷಯಗಳೊಂದಿಗೆ ರಾಷ್ಟ್ರೀಯ ಜಾಗೃತಿ ಕಾರ್ಯಕ್ರಮಗಳಿಗೂ ಅವಕಾಶ ನೀಡಬೇಕು. ಇದರಿಂದ ಯುವ ಸಮುದಾಯದಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳನ್ನು ಅರ್ಥ ಮಾಡಿಕೊಳ್ಳುವ ಮನೋಭಾವ ಬೆಳೆಯುತ್ತದೆ; ಎಲ್ಲರನ್ನೂ ಸಮಾನವಾಗಿ ಕಾಣುವ ಭಾವೈಕ್ಯತೆಗೆ ಅದು ಕಾರಣವಾಗುವುದು’ ಎಂದು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ.ಎಸ್.ಎಂ.ಶಿವಪ್ರಕಾಶ್ ಹೇಳಿದ್ದಾರೆ.
ಭಾರತ ಸ್ವಾತಂತ್ರ್ಯ ಅಮೃತೋತ್ಸವ ಸಂದರ್ಭದಲ್ಲಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಶ್ರೀ ಭಾರತೀ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಂತೂರು ಭಾರತಿ ಕಾಲೇಜಿನ ಸಭಾಂಗಣದಲ್ಲಿ ಜರಗಿದ ‘ಅಮೃತ ಸಾಂಸ್ಕೃತಿಕ ಸಂವಹನ’ ಕಾರ್ಯಕ್ರಮದ ಪ್ರಧಾನ ಉಪನ್ಯಾಸಕಾರರಾಗಿ ಅವರು ಮಾತನಾಡಿದರು. ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನ್ ದಾಸ್ ಅವರು ‘ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಂಡ ಅಬ್ಬಕ್ಕ ರಾಣಿ ತುಳುನಾಡಿನ ವೀರ ಮಹಿಳೆ ಎಂಬುದು ನಮ್ಮ ಹೆಮ್ಮೆ. ಆಕೆಯ ಹೆಸರಿನಲ್ಲಿ ರಾಷ್ಟ್ರ ಜಾಗೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು 75 ನೇ ಸ್ವಾತಂತ್ರ್ಯೋತ್ಸವಕ್ಕೆ ಪ್ರತಿಷ್ಠಾನದ ಮಹತ್ತರ ಕೊಡುಗೆ’ ಎಂದರು. ‘ಮನೆ ಮನೆಗೆ ತ್ರಿವರ್ಣಧ್ವಜ’ ರಾಷ್ಟ್ರೀಯ ಅಭಿಯಾನಕ್ಕೆ ಪೂರಕವಾಗಿ ಪ್ರತಿಷ್ಠಾನದ ವತಿಯಿಂದ ರಾಷ್ಟ್ರಧ್ವಜವನ್ನು ಡಾ.ಹರಿಕೃಷ್ಣ ಪುನರೂರು ಸಂಸ್ಥೆಯ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು. ಭಾರತೀ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಗಂಗಾರತ್ನ ಮುಗುಳಿ ಮತ್ತು ಗೋರಿಗುಡ್ಡೆ ಕಿಟ್ಟೆಲ್ ಮೆಮೋರಿಯಲ್ ಪ್ರೌಢಶಾಲಾ ಶಿಕ್ಷಕ ಶ್ರೀಕೃಷ್ಣ ಎನ್. ಅತಿಥಿಗಳಾಗಿದ್ದರು.
ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ,ಪ್ರಸ್ತಾವನೆಗೈದರು. ಕೋಶಾಧಿಕಾರಿ ಪಿ.ಡಿ.ಶೆಟ್ಟಿ ವಂದಿಸಿದರು. ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ಸಂಯೋಜಿಸಿದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ವಿಜಯಲಕ್ಷ್ಮಿ ಬಿ.ಶೆಟ್ಟಿ, ನಮಿತಾ ಶ್ಯಾಂ, ಸುಮಾ ಪ್ರಸಾದ್, ಸತೀಶ್ ಸುರತ್ಕಲ್, ದೀಪಕ್ ರಾಜ್ ಉಳ್ಳಾಲ್ , ನಿರ್ಮಲ್ ಭಟ್ ಕೊಣಾಜೆ ಉಪಸ್ಥಿತರಿದ್ದರು.
‘ ಅಮೃತ ಸ್ವಾತಂತ್ರ್ಯ ಸಾಂಸ್ಕೃತಿಕ ಸಂವಹನ ‘ದ ಅಂಗವಾಗಿ ಹಾಸ್ಯ ಸಿಂಚನ ಮತ್ತು ದೇಶಭಕ್ತಿ ಗೀತೆಗಳ ಗಾಯನ ಜರಗಿತು.