ಸುದ್ದಿ

ಅಲ್ಲಮ ಪೀಠದಿಂದ ಅನುಭವದ ನಡೆ ಅನುಭಾವದ ನುಡಿ ಉಪನ್ಯಾಸ…

ಕ್ರಮಬದ್ಧ ಕಲಿಕೆಯಿಂದ ಅರಿವಿನ ವಿಸ್ತರಣೆ- ಭಾಸ್ಕರ ರೈ ಕುಕ್ಕುವಳ್ಳಿ ...

ಮಂಗಳೂರು: ‘ತರಗತಿಯ ಶಿಕ್ಷಣದಿಂದ ಕೇವಲ ವಿಷಯಜ್ಞಾನ ಪಡೆಯಬಹುದು. ಆದರೆ ಜೀವನ ಕೌಶಲ್ಯವನ್ನು ತಿಳಿಯಲು ಜ್ಞಾನದ ವಿವಿಧ ಶಾಖೆಗಳ ಅನ್ವೇಷಣೆ ಮತ್ತು ಅವುಗಳ ಕ್ರಮಬದ್ಧ ಕಲಿಕೆ ಅಗತ್ಯ. ಶ್ರೇಷ್ಠ ಸಾಧಕರು ಹಾಗೂ ದಾರ್ಶನಿಕರ ಜೀವನಾದರ್ಶ ಮತ್ತವರ ಚಿಂತನೆಗಳ ಅಧ್ಯಯನದಿಂದ ನಮ್ಮ ಅರಿವು ವಿಸ್ತಾರಗೊಳ್ಳುವುದು’ ಎಂದು ಸಾಹಿತಿ,ಸಂಘಟಕ ಮತ್ತು ಜಾನಪದ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಅಲ್ಲಮಪ್ರಭು ಪೀಠ ಕಾಂತಾವರ ವತಿಯಿಂದ ನಡೆಸುವ ಅನುಭವದ ನಡೆ ಅನುಭಾವದ ನುಡಿ ತಿಂಗಳ ಉಪನ್ಯಾಸ ಸರಣಿಯಲ್ಲಿ ಲಿಂಗೈಕ್ಯ ಗೋದಾವರಿಯಮ್ಮ ವೀರಭದ್ರಪ್ಪ ಪನಸಾಲೆ ಜನದಾಡಾ ಮತ್ತು ನವಲಿ ಮಹದೇವಪ್ಪ ದಾವಣಗೆರೆ ಇವರ ದತ್ತಿ ಉಪನ್ಯಾಸವಾಗಿ ನಗರದ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ ‘ಕಲಿಕೆ,ತಿಳುವಳಿಕೆ ಮತ್ತು ಅರಿವು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
‘ಅಲ್ಲಮ-ಬಸವಾದಿ ಶರಣರು, ಕನಕ-ಪುರಂದರಾದಿ ದಾಸ್ಯ ಶ್ರೇಷ್ಠರು ಕಂಡರಸಿದ ಜೀವನ ದರ್ಶನ ಆ ನಂತರದ ಪೀಳಿಗೆಗೆ ಮಾರ್ಗಸೂಚಿಗಳಾಗಿ ಲೌಕಿಕ ಬದುಕಿನ ಸಾರ್ಥಕತೆಯತ್ತ ಬಿಟ್ಟು ಮಾಡಿವೆ. ವೇದೋಪನಿಷತ್ತುಗಳ ಸಾರವನ್ನು ಅನುಭಾವದ ನೆಲೆಯಲ್ಲಿ ಸರಳವಾಗಿ ನಿರೂಪಿಸುವ ಈ ಸಾಹಿತ್ಯ ಜನಸಾಮಾನ್ಯರನ್ನು ಸುಲಭವಾಗಿ ತಲುಪುತ್ತದೆ. ಆಧುನಿಕ ಶಿಕ್ಷಣ ಪದ್ಧತಿಗೂ ಪ್ರಸ್ತುತವೆನಿಸುವ ಅನೇಕ ಜೀವನ ಮೌಲ್ಯಗಳನ್ನು ಅವು ಬೋಧಿಸಿವೆ’ ಎಂದವರು ನುಡಿದರು.
ಅಲ್ಲಮಪ್ರಭು ಪೀಠದ ಸಂಚಾಲಕ ಕಲ್ಲೂರು ನಾಗೇಶ ಪ್ರಾಸ್ತಾವಿಕ ಭಾಷಣ ಮಾಡಿದರು. ಕೆನರಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲತಾ ಮಲ್ಲೇಶ್ವರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘದ ನಿರ್ದೇಶಕ ಡಾ.ಮಧುಕೇಶ್ವರ ಶಾಸ್ತ್ರಿ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಸಾಹಿತ್ಯ ಸಂಘ ಮತ್ತು ಅಲ್ಲಮ ಪ್ರಭು ಪೀಠದ ವತಿಯಿಂದ ಉಪನ್ಯಾಸಕಾರರನ್ನು ಸನ್ಮಾನಿಸಲಾಯಿತು.
ಕನ್ನಡ ವಿಭಾಗದ ರಘು ಇಡ್ಕಿದು ಮತ್ತು ಮಂಜುಳಾ ಜನಾರ್ಧನ್ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು.

Related Articles

Back to top button