ಸಂಸ್ಕೃತಿ ನಾಡಿನ ಅಂತರ್ಜಲವಿದ್ದಂತೆ- ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ…
ವಿಟ್ಲ: ಸಂಸ್ಕೃತಿ ನಾಡಿನ ಅಂತರ್ಜಲ ಇದ್ದಂತೆ. ನಿರಂತರ ಹರಿಯುತ್ತಿರಬೇಕು. ಬತ್ತಿ ಹೋಗಬಾರದು. ಮುಂದಿನ ತಲೆಮಾರಿಗೆ ವರ್ಗಾಯಿಸುವ ಜವಾಬ್ದಾರಿ ಹಿರಿಯರಲ್ಲಿ ಕಡಿಮೆಯಾಗಬಾರದು. ಹಿರಿಯರ ಪ್ರತಿಷ್ಠಾನವು ಕಿರಿಯರಿಗೆ ಮಾರ್ಗದರ್ಶನ ನೀಡುವ ಸದುದ್ದೇಶವನ್ನು ಇಟ್ಟುಕೊಂಡು ರಾಜ್ಯಾದ್ಯಂತ ಪಸರಿಸಲಿ ಎಂದು ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಆಶೀರ್ವಚನ ನೀಡಿದರು.
ಅವರು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಮಾವೇಶವನ್ನು ಶನಿವಾರ ಶ್ರೀ ಸತ್ಯಸಾಯಿ ವಿಹಾರ ಅಳಿಕೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಗಳು ಆಶೀರ್ವಚನ ನೀಡಿದರು. ಹಿರಿಯ ಮಾನಸಿಕ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಭಕ್ತಿಮಾರ್ಗದಲ್ಲಿ ಮುನ್ನಡೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಯೋಗ , ಧ್ಯಾನಗಳಿಗೆ ಒತ್ತು ನೀಡುವ , ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಸತ್ಸಂಗಗಳನ್ನು ಏರ್ಪಡಿಸಬೇಕು. ಮಾನಸಿಕ ದೌರ್ಬಲ್ಯವನ್ನು ಹೋಗಲಾಡಿಸಿ ಎಲ್ಲರೂ ಪರಸ್ಪರ ಪ್ರೀತಿಯಿಂದ ಬದುಕುವಂತೆ ಪ್ರತಿಷ್ಠಾನವು ಕಾರ್ಯನಿರ್ವಹಿಸಿ ಮಾದರಿ ಸಂಘಟನೆಯಾಗಿ ಬೆಳೆಯಲಿ ಎಂದು ಆಶೀರ್ವಚನ ನೀಡಿದರು.
ಸತ್ಯಸಾಯಿ ಲೋಕಾ ಸೇವಾಟ್ರಸ್ಟ್ ಅಳಿಕೆಯ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ವಿಠಲ ಶೆಟ್ಟಿ, ಲೋಕಾಸೇವಾ ಅಳಿಕೆಯ ಕಾರ್ಯದರ್ಶಿ ಚಂದ್ರಶೇಖರ ಭಟ್ ಶುಭ ಹಾರೈಸಿ ಮಾತನಾಡಿದರು.
ಆನಂದ ಆಶ್ರಮ ಪುತ್ತೂರಿನ ಡಾ.ಗೌರಿ ಪೈ ಎಮ್.ಡಿ., ಭಾರತ ಸೇವಾಶ್ರಮ ಕನ್ಯಾನದ ಎಸ್.ಈಶ್ವರ ಭಟ್, ಸಾಯಿನಿಕೇತನ ಆಶ್ರಮ ಮಂಜೇಶ್ವರದ ಡಾ. ಉದಯ ಕುಮಾರ್ ಭಟ್ ಇವರ ಸಾಧನೆಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಕಜಂಪಾಡಿ ಸುಬ್ರಮಣ್ಯ ಭಟ್ ,ಶ್ರೀ ಭುಜಬಲಿ ಧರ್ಮಸ್ಥಳ , ಕಾನ ಈಶ್ವರ ಭಟ್ ಅಳಿಕೆ, ಮಾಜಿ ಶಾಸಕ ಅಣ್ಣಾ ವಿನಯಚಂದ್ರ ಸುಳ್ಯ , ಬಾಲಕೃಷ್ಣ ಬೋರ್ಕರ್ ಪುತ್ತೂರು, ನಾರ್ಯ ಶ್ರೀನಿವಾಸ ಶೆಟ್ಟಿ ,ದುಗ್ಗಪ್ಪ ಎನ್, ಲೋಕೇಶ್ ಹೆಗ್ಡೆ, ಬಿ.ಎನ್ ಮಹಾಲಿಂಗ ಭಟ್, ಭಾಸ್ಕರ ಬಾರ್ಯ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ. ಎ.ವಿ. ನಾರಾಯಣ ಸ್ವಾಗತಿಸಿದರು. ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರಸ್ತಾವನೆ ಗೈದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು. ರಾಜಮಣಿ ರಾಮಕುಂಜ ನಿರೂಪಿಸಿದರು.