ಸರ್ಕಾರದಿಂದ ವಿಶ್ವಕರ್ಮರಿಗೆ ಶಕ್ತಿ ತುಂಬುವ ಕೆಲಸವಾಗಬೇಕು-ವಿಕ್ರಮ್ ಐ ಆಚಾರ್ಯ….

ಪುತ್ತೂರು: ವಿಶ್ವಕರ್ಮ ಸಮಾಜದಲ್ಲಿ ಬಡತನ ಪ್ರಮಾಣ ಹೆಚ್ಚುತ್ತಿದೆ. ಉದ್ಯೋಗವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಆರ್ಥಿಕ, ಆರೋಗ್ಯ ಸೇರಿದಂತೆ ಹಲವು ಬಗೆಯ ಸಮಸ್ಯೆಗಳಿಂದ ಬಳಲುತ್ತಿರುವ ವಿಶ್ವಕರ್ಮ ಸಮುದಾಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಕ್ತಿ ಮತ್ತು ಚೈತನ್ಯ ತುಂಬುವ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ವಿಶ್ವಕರ್ಮ ಯುವ ಮಿಲನ್‍ನ ರಾಜ್ಯಾಧ್ಯಕ್ಷ ವಿಕ್ರಮ್ ಐ. ಆಚಾರ್ಯ ಆಗ್ರಹಿಸಿದ್ದಾರೆ.
ಅವರು ಸೋಮವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾನತಾಡಿ ಚಿನ್ನ ಬೆಳ್ಳಿ ಕೆಲಸ, ಮರದ ಕೆಲಸ, ಕಬ್ಬಿಣ ಕೆಲಸ, ಕಂಚಿನ ಕೆಲಸ ಮತ್ತು ಶಿಲ್ಪ ಶಾಸ್ತ್ರಕ್ಕೆ ಸಂಬಂಧಪಟ್ಟ ಕೆಲಸಗಳನ್ನು ವಿಶ್ವಕರ್ಮರು ಸಾವಿರಾರು ವರ್ಷಗಳಿಂದ ನಿರ್ವಹಿಸುತ್ತಾ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇತರ ಸಮುದಾಯಗಳೂ ಈ ಕೆಲಸ ಮಾಡುತ್ತಿವೆ. ಜತೆಗೆ ಚಿನ್ನದ ಕುಸುರಿ ಕೆಲಸಗಳನ್ನು ಯಾಂತ್ರೀಕೃತವಾಗಿ ಮಾಡಲಾಗುವ ಕಾರಣ ವಿಶ್ವಕರ್ಮರಿಗೆ ಉದ್ಯೋಗ ಇಲ್ಲದಂತಾಗಿದೆ. ತಮ್ಮ ಕೆಲಸದಲ್ಲಿ ಆರೋಗ್ಯದ ಸಮಸ್ಯೆ ಬಹುಬೇಗ ಆವರಿಸುವ ಕಾರಣ ಜೀವನದ ಸಂಧ್ಯಾ ಕಾಲದಲ್ಲಿ ಸಂಕಷ್ಟ ಎದುರಿಸುವ ಸ್ಥಿತಿ ಸಮಾಜದ ಹಿರಿಯರಿಗಿದೆ. ಅದಕ್ಕೆ ತಕ್ಕಂತೆ ಆರ್ಥಿಕ ಚೈತನ್ಯ ಇಲ್ಲದಂತಾಗಿದೆ. ವಿಶ್ವಕರ್ಮರು ಅಸಂಘಟಿತ ಕಾರ್ಮಿಕ ವಲದಯಲ್ಲಿ ಬರುತ್ತಿದ್ದರೂ, ಇತರ ಅಸಂಘಟಿತ ವಲಯದವರಿಗೆ ಸಿಗುವ ಸವಲತ್ತು ಸಿಗುತ್ತಿಲ್ಲ. ಕಟ್ಟಡ ಕಾರ್ಮಿಕರಿಗೆ ಗುರುತುಚೀಟಿ ಮೂಲಕ ನಾನಾ ಸೌಲಭ್ಯ ಸಿಗುತ್ತಿದ್ದರೂ ನಮಗೆ ಸಿಗುತ್ತಿಲ್ಲ. ಆರ್ಥಿಕ ನಷ್ಟದ ಕಾರಣದಿಂದ ಬ್ಯಾಂಕ್ ಸಾಲ ಸಿಗುತ್ತಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕೆಲ ವರ್ಷಗಳ ಹಿಂದೆ ಸ್ಥಾಪನೆಯಾದ ವಿಶ್ವಕರ್ಮ ಮಂಡಳಿಗೆ ಸರಕಾರದಿಂದ ವಾರ್ಷಿಕ 15 ಕೋಟಿ ಸಿಗುತ್ತಿದ್ದು, ಈಗ 25 ಕೋಟಿಗೆ ಏರಿದೆ. ಇದನ್ನು ಪ್ರತೀ ಜಿಲ್ಲೆಗಳಿಗೆ ಹಂಚಿ ಸಾಲ ನೀಡಲಾಗುತ್ತಿದೆ. ಇದು ನಮ್ಮ ಸಮುದಾಯಕ್ಕೆ ಸಾಕಾಗುವುದಿಲ್ಲ. ದ.ಕ. ಜಿಲ್ಲೆ ಒಂದರಲ್ಲೇ 60,000 ಜನಸಂಖ್ಯೆ ಇಲ್ಲಿನ ಕೇವಲ 112 ಮಂದಿಗೆ ಮಾತ್ರ ಕಳೆದ ಸಾಲಿನಲ್ಲಿ ಸಾಲ ಸಿಕ್ಕಿದೆ. ಹೀಗಾಗಿ ಈ ಮೊತ್ತವನ್ನು ಹೆಚ್ಚಿಸಿ ಎಲ್ಲ ಕುಟುಂಬಗಳಿಗೂ ಸಾಲ ಸೌಲಭ್ಯ ನೀಡುವಂತಾಗಬೇಕು ಎಂದರು.
ವಿಶ್ವಕರ್ಮ ಸಮಾಜದ ಕುಶಲಕರ್ಮಿಗಳಿಗೆ ಗುರುತಿನ ಚೀಟಿ ನೀಡಬೇಕು, ಕನಿಷ್ಠ ವೇತನ ನಿಗದಿ ಮಾಡಬೇಕು, ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು, ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಉಚಿತ ಉನ್ನತ ಶಿಕ್ಷಣ ಸಿಗುವಂತಾಗಬೇಕು, ಚಿನ್ನದ ಕೆಲಸಗಾರರಿಗೆ ಪಿಂಚಣಿ ಸೌಲಭ್ಯ ಸಿಗುವಂತಾಗಬೇಕು. ಈ ಎಲ್ಲ ಬೇಡಿಕೆಗಳನ್ನು ಒಳಗೊಂಡ ಸಮಗ್ರ ಮನವಿಯನ್ನು ರಾಜ್ಯದ ಮುಖ್ಯಮಂತ್ರಿಗಳು ಮತ್ತು ದೇಶದ ಪ್ರಧಾನಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರಕಾರ 3ವರ್ಷಗಳ ಹಿಂದೆ ವಿಶ್ವಕರ್ಮ ಜಯಂತಿ ಆಚರಿಸಲು ನಿರ್ಧರಿಸಿದೆ. ಇದರ ಫಲವಾಗಿ ಪ್ರತೀ ವರ್ಷ ಸರಕಾರಿ ಕಾರ್ಯಕ್ರಮ ನಡೆಯುತ್ತಿದೆ. ಆದರೆ ವಿಶ್ವಕರ್ಮ ಜಯಂತಿ ಎಂಬ ಪರಿಕಲ್ಪನೆ ಸರಿಯಲ್ಲ. ವಿಶ್ವಕರ್ಮ ದೇವರ ಮಹೋತ್ಸವ ಎಂದಾಗಬೇಕು. ಜಯಂತಿ ಎಂಬ ಶಬ್ದ ವಿಶ್ವಕರ್ಮ ದೇವರ ಪರಿಕಲ್ಪನೆಗೆ ಹೊಂದಾಣಿಕೆ ಆಗುವುದಿಲ್ಲ. ವಿಶ್ವಕರ್ಮ ಸಮಾಜದ ವತಿಯಿಂದ ಮಹೋತ್ಸವ ಎಂದೇ ಆಚರಿಸಲಾಗುತ್ತಿದೆ. ಸರಕಾರವೂ ಇದೇ ಶಬ್ದವನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಶ್ವಕರ್ಮ ಯುವ ಮಿಲನ್‍ನ ಪ್ರಧಾನ ಕಾರ್ಯದರ್ಶಿ ಸೂರಜ್ ಟಿ. ಆಚಾರ್ಯ, ದ.ಕ. ಜಿಲ್ಲಾಧ್ಯಕ್ಷ ಹರೀಶ್ ಬಿ. ಆಚಾರ್ಯ, ಪುತ್ತೂರು ತಾಲೂಕು ಅಧ್ಯಕ್ಷ ಹರೀಶ್ ಕೆ. ಆಚಾರ್ಯ, ಮಾಧ್ಯಮ ಪ್ರಮುಖ್ ದಿವಾಕರ ಆಚಾರ್ಯ ಪಾಲ್ತಾಡಿ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button