ಮಾಣಿ – ಅಟಲ್ ಟಿಂಕರಿಂಗ್ ಲ್ಯಾಬ್ ಲೋಕಾರ್ಪಣೆ..

ಬಂಟ್ವಾಳ : ಗ್ರಾಮೀಣ ಮಕ್ಕಳಲ್ಲಿ ವಿಶೇಷ ಪ್ರತಿಭೆಗಳಿವೆ ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಹಳ್ಳಿಗಳಲ್ಲಿ ವಿದ್ಯಾರ್ಥಿಗಳಿಗೆ ಈಗ ಹೆಚ್ಚಿನ ಅನುಕೂಲತೆಗಳು ಮತ್ತು ಅವಕಾಶಗಳಿವೆ. ಅದಕ್ಕೆ ಪೂರಕವಾಗಿ ಅಟಲ್ ಟಿಂಕರಿಂಗ್ ಲ್ಯಾಬ್ ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾಗಿ ಪ್ರಯೋಗಗಳನ್ನು ಮಾಡುವುದಕ್ಕೆ ಪ್ರಯೋಜನಕಾರಿಯಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಮಾಣಿ ಕರ್ನಾಟಕ ಪ್ರೌಢಶಾಲೆಯಲ್ಲಿ ಜ. 30ರಂದು ಕೇಂದ್ರ ಸರಕಾರ ನೀತಿ ಆಯೋಗ ಮತ್ತು ಅಟಲ್ ಇನ್ನೋವೇಷನ್ ಮಿಷನ್ ಇವರ ಆಶ್ರಯದಲ್ಲಿ ದ.ಕ ಜಿಲ್ಲೆಯ 40ನೇ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಭಾರತವು ಕೋವಿಡ್ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಿದೆ. ಭಾರತದ ಕೋವಿಡ್ ವ್ಯಾಕ್ಸಿನೇಷನ್‍ಗೆ 93 ದೇಶಗಳಿಂದ ಬೇಡಿಕೆ ಇದೆ. ಆತ್ಮನಿರ್ಭರ ಭಾರತದ ಕಲ್ಪನೆಯಂತೆ ಯುವಕರ ಸಬಲೀಕರಣಕ್ಕೆ, ದೇಶೀಯ ಉತ್ಪಾದನೆಗೆ ಕೇಂದ್ರ ಸರಕಾರವು ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಏಕ ರೀತಿಯ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದೂ ಅವರು ತಿಳಿಸಿದರು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ನಾರಾಯಣ ಹೆಗ್ಡೆ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಅಟಲ್ ಟಿಂಕರಿಂಗ್ ಲ್ಯಾಬ್‍ನ ಸಂಯೋಜಕಿ ಜಯಲಕ್ಷ್ಮೀ ಪುತ್ತೂರು ಪ್ರಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಜ್ಞಾನ ತಂತ್ರಾಜ್ಞಾನವನ್ನು ಬೆಳೆಸುವುದಕ್ಕೆ ಕೇಂದ್ರ ಸರಕಾರವು ಈ ಯೋಜನೆಯನ್ನು ರೂಪಿಸಿದೆ. ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಪ್ರಯೋಗಾಲಯವು ನಿರ್ಮಾಣವಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಶಾಲಾಭಿವೃದ್ದಿ ಸಮಿತಿ ಕಾರ್ಯದರ್ಶಿ ಕೆ. ಇಬ್ರಾಹಿಂ, ಕೋಶಾಧಿಕಾರಿ ಜಗನ್ನಾಥ ಚೌಟ, ಸದಸ್ಯರಾದ ಕುಶಲ ಎಂ. ಪೆರಾಜೆ, ಮಹಮ್ಮದ್ ಅಬೀಬ್ ಉಪಸ್ಥಿತರಿದ್ದರು. ಬಂಟ್ವಾಳ ಶಿಕ್ಷಣ ಇಲಾಖೆಯ ರಾಘವೇಂದ್ರ ಬಲ್ಲಾಳ್, ಸುಜಾತ, ಸುಧಾ ಭಾಗವಹಿಸಿದ್ದರು.
ಮಾಣಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ ಸ್ವಾಗತಿಸಿದರು. ಮಾರ್ಗದರ್ಶಕಿ ಜಯಲಕ್ಷ್ಮೀ ಮತ್ತು ಹತ್ತನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ಯಾಮಲ ಮತ್ತು ನಯನಾ ನಿರೂಪಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ.ಕೆ. ಭಂಡಾರಿ ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button