ಬಂಟ್ವಾಳ- ಫೆ.20ರಂದು ಕನ್ನಡ ಭವನ ಉದ್ಘಾಟನೆ, 21ರಂದು ತಾಲೂಕು ಸಾಹಿತ್ಯ ಸಮ್ಮೇಳನ…

ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜೆಯಲ್ಲಿ ನಿರ್ಮಿಸಲಾದ ಕನ್ನಡ ಭವನ ಉದ್ಘಾಟನೆ ಫೆ.20ರಂದು ನಡೆಯಲಿದ್ದು, ಫೆ.21ರಂದು ಬಂಟ್ವಾಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್ ಹೇಳಿದ್ದಾರೆ.
ಬಿ.ಸಿ.ರೋಡಿನ ಕೈಕುಂಜೆ ರಸ್ತೆಯ ಸಾಧನಾ ರೆಸಿಡೆನ್ಸಿಯಲ್ಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಕಚೇರಿಯಲ್ಲಿ ಸಮಿತಿ ಗೌರವಾಧ್ಯಕ್ಷ ಬಸ್ತಿ ವಾಮನ ಶೆಣೈ, ಕೊಳಕೆ ಗಂಗಾಧರ ಭಟ್, ಅಬ್ಬಾಸ್ ಆಲಿ, ರವೀಂದ್ರ ಕುಕ್ಕಾಜೆ, ಜಯಾನಂದ ಪೆರಾಜೆ, ಶಿವಶಂಕರ್, ಕೃಷ್ಣ ಶರ್ಮ ಉಪಸ್ಥಿತಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಹಿರಿಯ ಸಾಹಿತಿ ಡಾ.ಸುರೇಶ ನೆಗಳಗುಳಿ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನ ಯಶಸ್ವಿಗೊಳಿಸಲು ಈಗಾಗಲೇ ಹಿರಿಯರಾದ ಬಸ್ತಿ ವಾಮನ ಶೆಣೈ ಮತ್ತು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದೆ. ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಮತ್ತು ಅಧ್ಯಕ್ಷ ಐತಪ್ಪ ಆಳ್ವ ಬಿ.ಸಿ.ರೋಡು ನೇತೃತ್ವದಲ್ಲಿ ವಿವಿಧ ಉಪ ಸಮಿತಿಗಳನ್ನು ರಚಿಸಿ ಕಾರ್ಯೋನ್ಮುಖರಾಗಿದ್ದೇವೆ ಎಂದರು.
ಬಿ.ಸಿ.ರೋಡಿನ ಕೈಕಂಬದಿಂದ ಕೈಕುಂಜೆಯವರೆಗೆ ಕನ್ನಡ ಭುವನೇಶ್ವರಿ ಮೆರವಣಿಗೆ ನಡೆಯಲಿದ್ದು, ಬೆಳಗ್ಗೆ 8 ಗಂಟೆಗೆ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಚಾಲನೆ ನೀಡುವರು. ಕನ್ನಡ ಭುವನೇಶ್ವರಿಗೆ ಮೊಡಂಕಾಪು ಚರ್ಚ್ ಧರ್ಮಗುರು ರೆ.ಫಾ.ವೆಲೇರಿಯನ್ ಡಿಸೋಜ ಪುಷ್ಪಾರ್ಚನೆ ಮಾಡುವರು. ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಕನ್ನಡ ಭವನ ಸಂಕೀರ್ಣದಲ್ಲಿ ಬೆಳಗ್ಗೆ 9ಕ್ಕೆ ಆಶೀರ್ಚನ ನೀಡುವರು. 9.15ರಿಂದ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ರಾಷ್ಟ್ರಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಪರಿಷತ್ ಧ್ವಜಾರೋಹಣ ಹಾಗೂ ಕಸಾಪ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್ ಕನ್ನಡ ಧ್ವಜಾರೋಹಣ ನೆರವೇರಿಸುವರು.
ಬೆಳಗ್ಗೆ 9.40ಕ್ಕೆ ಕನ್ನಡ ಭವನ ಹಾಗೂ ಸಾರ್ವಜನಿಕ ರಂಗಮಂದಿರವನ್ನು ಕಸಾಪ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ್ ಲೋಕಾರ್ಪಣೆ ಮಾಡುವರು. ದೀಪ ಪ್ರಜ್ವಲನವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸುವರು. ಸಭಾಭವನವನ್ನು ಸಚಿವ ಎಸ್.ಆಂಗಾರ ಉದ್ಘಾಟಿಸುವರು. ರಾಜ್ಯಮಟ್ಟದ ಪುಸ್ತಕ ಸಂತೆಯನ್ನು ಶಾಸಕ ಯು.ರಾಜೇಶ್ ನಾಯ್ಕ್ ಉದ್ಘಾಟಿಸುವರು. ಪಂಜೆ ಮಂಗೇಶರಾವ್, ಬಿ.ವಿ.ಕಾರಂತ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ನೀರ್ಪಾಜೆ ಭೀಮ ಭಟ್ಟರ ಭಾವಚಿತ್ರಗಳನ್ನು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅನಾವರಣಗೊಳಿಸುವರು. ದಾನಿಗಳ ನಾಮಫಲಕವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅನಾವರಣ ಮಾಡುವರು. ತಾಲೂಕು ಸಮ್ಮೇಳನಾಧ್ಯಕ್ಷರ ಭಾವಚಿತ್ರವನ್ನು ವಿಧಾನಪರಿಷತ್ತು ಸದಸ್ಯ ಪ್ರತಾಪ್ ಸಿಂಹ ನಾಯಕ್ ಅನಾವರಣ ಮಾಡುವರು. ರಾಜ್ಯ, ಜಿಲ್ಲಾ ಕಸಾಪ ಪದಾಧಿಕಾರಿಗಳ ನಾಮಫಲಕವನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅನಾವರಣ ಮಾಡುವರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್ಟರ ಭಾವಚಿತ್ರವನ್ನು ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅನಾವರಣ ಮಾಡುವರು. ಉದ್ಯಮಿ ರಘುನಾಥ ಸೋಮಯಾಜಿ ಗೋವಿಂದ ಭಟ್ಟರಿಗೆ ಗೌರವಾರ್ಪಣೆ ಮಾಡುವರು. ಶೃಂಗೇರಿ ಮಠ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಮಹಮ್ಮದ್ ಯಾಸೀರ್ ಅವರ ಕಲ್ಲಡ್ಕ ಮ್ಯೂಸಿಯಂ ಪ್ರದರ್ಶನ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಏರ್ಯ ಆನಂದಿ ಆಳ್ವ ಮತ್ತು ನೀರ್ಪಾಜೆ ಶಂಕರಿ ಭಟ್ ಮೊದಲಾದವರು ಭಾಗವಹಿಸುವರು ಎಂದು ಅವರು ತಿಳಿಸಿದರು.
ಅಪರಾಹ್ನ 2ರಿಂದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ವತಿಯಿಂದ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ ಭಟ್ ನೇತೃತ್ವದಲ್ಲಿ ನಡೆಯುವ ಭಾಷೆ ಮತ್ತು ಸಾಂಸ್ಕೃತಿಕ ವಿನಿಯಮ ವಿಚಾರಗೋಷ್ಠಿಯನ್ನು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ.ನಾವಡ ಉದ್ಘಾಟಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎ.ಸುಬ್ಬಣ್ಣ ರೈ, ಜೋಗಿ, ಡಾ. ಕಮಲಾಕ್ಷ ಕೆ. ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ವಿಟ್ಲ ಕ್ಷೇತ್ರದ ಮಾಜಿ ಶಾಸಕರುಗಳಾದ ಎ.ರುಕ್ಮಯ ಪೂಜಾರಿ, ಕೆ.ಎಂ.ಇಬ್ರಾಹಿಂ ಮತ್ತು ಪದ್ಮನಾಭ ಕೊಟ್ಟಾರಿ ಭಾಗವಹಿಸುವರು ಎಂದರು.
ಸಂಜೆ 5ಕ್ಕೆ ಬಂಟ್ವಾಳ ತಾಲೂಕು ಸಮ್ಮೇಳನಾಧ್ಯಕ್ಷರ ಸಮ್ಮಿಲನ ಡಾ.ಬಿ.ಎ.ವಿವೇಕ ರೈ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, 11 ಮಂದಿ ಪೂರ್ವಾಧ್ಯಕ್ಷರು ಭಾಗವಹಿಸಲಿದ್ದಾರೆ ಎಂದರು. ಸಂಜೆ 7.30ರಿಂದ ರಂಗಾಯಣದಿಂದ ಡಾ. ನಾ.ಡಿಸೋಜ ಕಾದಂಬರಿ ಆಧರಿತ ನಾಟಕ ಹಕ್ಕಿ ಕಥೆ ಪ್ರಸ್ತುತಗೊಳ್ಳಲಿದೆ.
21ರಂದು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಗಳೂರು ವಿವಿ ಕುಲಸಚಿವ ಕೆ.ರಾಜು ಮೊಗವೀರ ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷತೆಯನ್ನು ಸಾಹಿತಿ ಡಾ. ಸುರೇಶ ನೆಗಳಗುಳಿ ವಹಿಸುವರು. ಪೂರ್ವಾಹ್ನ 11 ಗಂಟೆಗೆ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಹಿನ್ನೆಲೆಯಲ್ಲಿ ಭಾಷಿಕ ಅನನ್ಯತೆ ಕುರಿತ ಗೋಷ್ಠಿ ಇರಲಿದೆ. ಅಪರಾಹ್ನ 1.30ಕ್ಕೆ ಸಾಹಿತ್ಯ ಪ್ರಸ್ತುತಿಯಲ್ಲಿ ಪ್ರಬಂಧ, ಗಝಲ್, ಕವನ, ಕಥೆ, ಚುಟುಕು ವಾಚನ ನಡೆಯಲಿದೆ. ಅಪರಾಹ್ನ 3ಕ್ಕೆ ಬಂಟ್ವಾಳ ತಿರುಮಲ ವೆಂಕಟರಮಣ ದೇವಳ ಯಕ್ಷಗಾನ ಪರಂಪರೆ ಕುರಿತು ವಿದ್ವಾಂಸ ಡಾ. ಎಂ.ಪ್ರಭಾಕರ ಜೋಷಿ ವಿಚಾರ ಮಂಡಿಸುವರು. 3.45ಕ್ಕೆ ಸನ್ಮಾನ ಕಾರ್ಯಕ್ರಮ ಇರಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಲಾಗುವುದು. ಸಂಜೆ 5ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಜರಾಯಿ ಆಯುಕ್ತ ಕೆ.ಎ.ದಯಾನಂದ ಸಮಾರೋಪ ಭಾಷಣ ಮಾಡಲಿದ್ದಾರೆ. ಸಂಜೆ 6.30ಕ್ಕೆ ಡಾ.ಕೆ.ಶಿವರಾಮ ಕಾರಂತ ಕಾದಂಬರಿ ಆಧಾರಿತ ತುಳು ಸಾಂಪ್ರದಾಯಿಕ ನಾಟಕ ಚೋಮನ ದುಡಿಯನ್ನು ಸುಳ್ಯ ಕಲ್ಮಡ್ಕದ ಕಲಾಗ್ರಾಮದ ತಂಡ ಪ್ರದರ್ಶಿಸಲಿದೆ. ಬಳಿಕ ರಾತ್ರಿ 9ರಿಂದ ಪೆರ್ಡೂರು ಮೇಳದಿಂದ ಶಪ್ತಭಾಮಿನಿ ಯಕ್ಷಗಾನ ಪ್ರದರ್ಶನ ಇರಲಿದೆ ಎಂದರು.

Sponsors

Related Articles

Leave a Reply

Your email address will not be published. Required fields are marked *

Back to top button