ಬೇಕಲ ಉಸ್ತಾದ್ ಇನ್ನಿಲ್ಲ…
ಮಂಗಳೂರು: ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲಾ ಖಾಝಿಯಾಗಿದ್ದ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಅಲ್ಪಕಾಲದ ಅಸೌಖ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇಸ್ಲಾಂ ಶರೀಅತ್, ಧಾರ್ಮಿಕ ವಿಚಾರದಲ್ಲಿ ಅಪಾರ ಪಾಂಡಿತ್ಯ, ಭೂಗೋಳ, ಖಗೋಳ ಶಾಸ್ತ್ರದಲ್ಲಿ ಆಳವಾದ ಅಧ್ಯಯನ ಹೊಂದಿದ್ದ ಬೇಕಲ ಉಸ್ತಾದ್ ಕರ್ನಾಟಕ ಹಾಗೂ ಕೇರಳ ರಾಜ್ಯದ ಜನತೆಯ ಮೆಚ್ಚುಗೆ ಗಳಿಸಿದ್ದರು.ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷರಾಗಿದ್ದ ಬೇಕಲ್ ಉಸ್ತಾದ್ ಅವರು ಜಾಮಿಯಾ ಸಅದಿಯಾ ಅರಬಿಯಾ ಶರೀಅತ್ ಕಾಲೇಜಿನ ಪ್ರಾಚಾರ್ಯರು, ಸಮಸ್ತ ಉಲಮಾ ಒಕ್ಕೂಟದ ಕೇಂದ್ರ ಮುಶಾವರ ಸದಸ್ಯರಾಗಿ ಅಲ್ ಅನ್ಸಾರ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಫೂಡಲ್ ಎಂಬಲ್ಲಿನ ಮುಹಮ್ಮದ್ ಮತ್ತು ಖದೀಜಾ ದಂಪತಿಯ ಪುತ್ರನಾಗಿ 1949ರಲ್ಲಿ ಜನಿಸಿದ್ದ ಅವರು ನರಿಂಗಾನ ಗ್ರಾಮದ ಡಿಜಿ ಕಟ್ಟೆಯ ಶಾಲೆಯಲ್ಲಿ 7ನೆ ತರಗತಿ ಕಲಿತ ಬಳಿಕ ಧಾರ್ಮಿಕ ವಿದ್ಯಾಭ್ಯಾಸ ಕಲಿಯಲು ಆಸಕ್ತಿ ವಹಿಸಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗೆ ‘ತಾಜುಲ್ ಫುಖಹಾಅ್’ ಎಂಬ ಬಿರುದು ಪಡೆದಿದ್ದಾರೆ.
ನರಿಂಗಾನ ಗ್ರಾಮದ ಪೂಡಲ್ ನಿವಾಸಿ ಅಲ್ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ (71) ಅವರು ಸತತ 43 ವರ್ಷಗಳಿಂದ ಬೇಕಲದಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸುವ ಮೂಲಕ ಬೇಕಲ್ ಉಸ್ತಾದ್ ಎಂದೇ ಜನಪ್ರಿಯರಾಗಿದ್ದಾರೆ.