ಸರಕಾರ ಪುಟಾಣಿ ಮಕ್ಕಳೊಂದಿಗೆ ಚೆಲ್ಲಾಟವಾಡುವುದೇ???…ಶಿಕ್ಷಣ ಸಚಿವರಿಗೆ ಉದ್ಯಮಿ ಶ್ರೀನಾಥ್ ಆಲೆಟ್ಟಿ ಪ್ರಶ್ನೆ….

ಸುಳ್ಯ: ಪುಟಾಣಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣಕ್ಕೆ ಮುಂದಾಗಿರುವ ರಾಜ್ಯ ಸರಕಾರ, ಗ್ರಾಮೀಣ ಪ್ರದೇಶದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸುಳ್ಯದ ಉದ್ಯಮಿ ಶ್ರೀನಾಥ್ ಆಲೆಟ್ಟಿ ಅವರು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಟ್ವಿಟ್ಟರ್ ಮೂಲಕ ಪತ್ರವನ್ನು ಕಳುಹಿಸಿದ್ದಾರೆ.

ಪತ್ರದ ಪೂರ್ಣ ವಿವರ ಹೀಗಿದೆ:
ಮಾನ್ಯ ಸಚಿವರೇ,
ಯಾಕೆ ಈ ತರಾತುರಿಯ ಕೆಲಸ. ಪುಟಾಣಿ ಮಕ್ಕಳಿಗೆ ಆನ್‌ಲೈನ್ ಮುಖಾಂತರ ಶಿಕ್ಷಣಕ್ಕೆ ಮುಂದಾಗಿರುವುದು ಇದು ಅಕ್ಷರಶ: ಸರಿಯಾದ ಕ್ರಮವಲ್ಲ. ಪುಟಾಣಿ ಮಕ್ಕಳು ತರಗತಿಯ ಕ್ಲಾಸ್‌ನಲ್ಲಿಯೇ ಕುಳಿತುಕೊಳ್ಳಲು ತಿಳಿಯದ ಮುಗ್ಧರು. ಇನ್ನು ಆನ್‌ಲೈನ್ ಕ್ಲಾಸ್‌ನಲ್ಲಿ ಕುಳಿತುಕೊಳ್ಳುವರೇ? ನೀವೇ ಒಂದು ಸಲ ಯೋಚಿಸಿ ಅಥವಾ ನಿಮ್ಮ ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಒಂದು ಸಲ ಪ್ರಯತ್ನಿಸಿ. ಈ ಪುಟ್ಟ ಮಕ್ಕಳಿಗೆ ಟಿ.ವಿ.ಯಲ್ಲಿ ಅಥವಾ ಮೊಬೈಲ್‌ನಲ್ಲಿ ಚಿಂಟೂ ಅಥವಾ ಇನ್ನಿತರ ಕಾರ್ಯಕ್ರಮಗಳನ್ನು ಹಾಕಿ ಕೊಟ್ಟಲ್ಲಿಯೂ ಕೂಡಾ ಮಕ್ಕಳು ಟಿ.ವಿ.ಯ ಮುಂದೆಯೋ ಅಥವಾ ಮೊಬೈಲ್ ಮುಂದೆಯೂ ಕುಳಿತುಕೊಳ್ಳುವುದಿಲ್ಲ. ಇನ್ನು ಆನ್‌ಲೈನ್ ಕ್ಲಾಸ್‌ನಲ್ಲಿ ಕುಳಿತುಕೊಳ್ಳುವರೇ? ಒಂದು ಸಲ ಯೋಚಿಸಿ. ಇನ್ನು ಕೆಲ ಮಕ್ಕಳ ಹೆತ್ತವರು ಹೊರಗಡೆ ದುಡಿಯಲು ಹೋದಾಗ ತಮ್ಮ ಮಕ್ಕಳನ್ನು ಮನೆಯಲ್ಲಿ ಹಿರಿಯರ ಜೊತೆಗೆ ಬಿಟ್ಟು ಹೋಗುತ್ತಾರೆ. ಆದರೆ ಅಲ್ಲಿ ಅವರಿಗೆ ಅದರ ಬಗ್ಗೆ ಅರಿವು ಇರುವುದಿಲ್ಲ, ಮೊಬೈಲ್ ಬಳಸಲೂ ಬರುವುದಿಲ್ಲ. ಇನ್ನು ಇಂತಹ ಮಕ್ಕಳಿಗೆ ಆನ್‌ಲೈನ್ ತರಗತಿ ಕನಸಿನ ಮಾತು. ಸರಿ ಇಷ್ಟರ ತನಕ ನಾನು ಹೇಳಿದ್ದು ಶ್ರೀಮಂತರ ವಿಷಯ.
ಇನ್ನು ಬಡವರ ಪರಿಸ್ಥಿತಿ ಕೇಳಿ ಸಚಿವರೇ, ನಾನು ರಾಜ್ಯದ ಬೇರೆ ಬೇರೆ ಗ್ರಾಮದ ವಿಷಯಕ್ಕೆ ಹೋಗುವುದಿಲ್ಲ. ನಮ್ಮ ಸುಳ್ಯ ತಾಲೂಕನ್ನೇ ಪರಿಗಣಿಸಿದರೆ ಅದರಲ್ಲೂ ಆಲೆಟ್ಟಿ ಎಂಬ ಗ್ರಾಮ ಬಹಳ ದೊಡ್ಡ ಗ್ರಾಮ. ಇಲ್ಲಿ ಸ್ಮಾರ್ಟ್ ಫೋನ್ (ಮೊಬೈಲ್) ಇಲ್ಲದ ಎಷ್ಟೋ ಮನೆಗಳಿವೆ. ಅಲ್ಲದೇ ಮೊಬೈಲ್ ಇದ್ದವರಿಗೂ ನಮ್ಮಂತ ಹಳ್ಳಿಗಳಲ್ಲಿ ಮೊಬೈಲ್ ಟವರ್ ಕೂಡಾ ಇರುವುದಿಲ್ಲ. ಅಥವಾ ಟವರ್ ಇದ್ದರೂ ನೆಟ್ ವರ್ಕ್ ಸಿಗುವುದಿಲ್ಲ. ಇಂತಹ ಸಮಯದಲ್ಲಿ ನಮ್ಮ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಬೇಕೆಂದರೆ ಸುಳ್ಯವನ್ನೇ ಅವಲಂಭಿಸಬೇಕಾಗುತ್ತದೆ. ಆದ್ದರಿಂದ ರಾಜ್ಯದಲ್ಲಿ ಇಂತಹ ಹಳ್ಳಿಗಳು ಹಾಗೂ ಸ್ಮಾರ್ಟ್ ಫೋನ್ ಇಲ್ಲದ ಬಡ ಕುಟುಂಬಗಳು ಎಷ್ಟು ಇವೆಯೆಂಬುದು ನಿಮಗೇ ತಿಳಿದಿರುತ್ತದೆ ಹೊರತು ನಮಗಲ್ಲ. ಒಂದು ವೇಳೆ ಇಂತಹಾ ಪುಟಾಣಿ ಮಕ್ಕಳಿಗೆ ನೀವು ಆನ್ ಲೈನ್ ಶಿಕ್ಷಣವನ್ನು ಪ್ರಾರಂಭಿಸಿದರೆ ಇಂತಹ ಮುಗ್ಧ ಪುಟಾಣಿ ಮಕ್ಕಳಿಗೆ ವಂಚಿಸಿದ ಹಾಗೆ ಆಗುವುದಿಲ್ಲವೇ ಎಂದು ಯೋಚಿಸಬೇಕಾಗಿದೆ. ದಿಟ್ಟ ನಿರ್ಧಾರಕ್ಕೆ ಬನ್ನಿ. ನಮ್ಮಂತಹ ಹಳ್ಳಿಗಳಲ್ಲಿರುವ ಮಕ್ಕಳಿಗೆ ಹಾಗೂ ಪುಟಾಣಿ ಮಕ್ಕಳೊಂದಿಗೆ ಚೆಲ್ಲಾಟವಾಡಬೇಡಿ. —-ಶ್ರೀನಾಥ್ ಆಲೆಟ್ಟಿ

Sponsors

Related Articles

Leave a Reply

Your email address will not be published. Required fields are marked *

Back to top button