ದ್ವಾದಶ ಯಕ್ಷಾಂಜಲಿ ಸಮಾರೋಪ…

ಬಂಟ್ವಾಳ: ಯಕ್ಷಗಾನವು ಪಂಡಿತ ಪಾಮರರೆಲ್ಲರಿಗೂ ಪೌರಾಣಿಕ ಜ್ಞಾನವನ್ನು ನೀಡುತ್ತದೆ. ಸಜ್ಜನಿಕೆಯನ್ನು ಬೆಳೆಸುವುದಕ್ಕೆ ಸಹಕಾರಿಯಾಗುತ್ತದೆ ಎಂದು ರೋಟರಿ ನಿಯೋಜಿತ ಗವರ್ನರ್ ಪ್ರಕಾಶ ಕಾರಂತ ಹೇಳಿದರು.
ಬಿ.ಸಿ.ರೋಡಿನ ಅನ್ನಪೋರ್ಣೆಶ್ವರಿ ದೇವಸ್ಥಾನದ ವಠಾರದಲ್ಲಿ ಶ್ರೀ ಶಂಕರ ಸೇವಾ ಪ್ರತಿಷ್ಠಾನ, ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ, ಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ವತಿಯಿಂದ ಏರ್ಪಡಿಸಲಾದ ಸರಣಿ ತಾಳಮದ್ದಳೆ ರಾಮಾಯಣ ದರ್ಶನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಶಂಕರ ನಾರಾಯಣ ಐತಾಳ್ , ಭಾಸ್ಕರ ಬಾರ್ಯ ಪುತ್ತೂರು ಮಾತನಾಡಿ ತಾಳಮದ್ದಳೆಯು ಮನರಂಜನೆಯಾಗಿರದೆ ಮನಪರಿವರ್ತನೆಯ ಕಲಾಪ್ರಕಾರವಾಗಿದೆ ಎಂದರು.
ವೇದಿಕೆಯಲ್ಲಿ ಅನ್ನಪೂರ್ಣೇಶ್ವರಿ ದೇವಸ್ಥಾನದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ , ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ , ಅನಾರು ಕೃಷ್ಣ ಶರ್ಮ, ವಿಶ್ವ ಭಾರತಿ ಟ್ರಸ್ಟ್ ನ ಅಧ್ಯಕ್ಷ ಪ್ರಶಾಂತ್ ಹೊಳ್ಳ ಉಪಸ್ಥಿತರಿದ್ದರು. ಶಕುಂತಳ ಸೋಮಯಾಜಿ, ಆಶಾಲತಾ ಐತಾಳ್, ನ್ಯಾಯವಾದಿ ಅಜಿತ್ ಕುಮಾರ್ ಅನಿಸಿಕೆ ವ್ಯಕ್ತ ಪಡಿಸಿದರು. ಕೆ.ಮೋಹನ್ ರಾವ್ ಸ್ವಾಗತಿಸಿ, ರಾಜಮಣಿ ರಾಮಕುಂಜ ವಂದಿಸಿದರು.
ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಮಾ ನಿಷಾದ ಯಕ್ಷಗಾನ ತಾಳಮದ್ದಲೆ ಜರಗಿತು. ರಾಮನಾಗಿ ಮೋಹನ್ ರಾವ್, ಸೀತೆಯಾಗಿ ಕುಂಬ್ಳೆ ಶ್ರೀಧರ್ ರಾವ್, ವಾಲ್ಮೀಕಿಯಾಗಿ ಶಂಭು ಶರ್ಮ , ಲಕ್ಷ್ಮಣನಾಗಿ ಪೂಕಳ ಲಕ್ಷ್ಮೀ ನಾರಾಯಣ ಭಟ್, ಶತ್ರುಘ್ನನಾಗಿ ಈಶ್ವರ ಪ್ರಸಾದ್ ಧರ್ಮಸ್ಥಳ ಅರ್ಥ ಹೇಳಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರದೀಪ್ ಗಟ್ಟಿ ಕಂಬಳ ಪದವು, ಚೆಂಡೆಯಲ್ಲಿ ಮುರಳಿಧರ್ ನೇರಂಕಿ, ಮದ್ದಳೆಯಲ್ಲಿ ರಾಮ ಹೊಳ್ಳ ಸುರತ್ಕಲ್ ಸಹಕರಿಸಿದರು.

Sponsors

Related Articles

Back to top button