ಮಾದಕ ವಸ್ತು ಸಾಗಾಟ ಆರೋಪ – ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ…

ಮಂಗಳೂರು: ಪ್ರಸಿದ್ಧ ಡ್ಯಾನ್ಸರ್ ಕಿಶೋರ್ ಅಮನ್ ಅಲಿಯಾಸ್ ಕಿಶೋರ್ ಶೆಟ್ಟಿಯನ್ನು ಇಂದು (ಶನಿವಾರ) ಮಂಗಳೂರು ನಗರ ಕ್ರೈಂ ಬ್ರ್ಯಾಂಚ್ ಪೊಲೀಸರು (ಸಿಸಿಬಿ) ಬಂಧಿಸಿದ್ದಾರೆ. ಮಾದಕ ವಸ್ತು ಸಾಗಾಟ ಆರೋಪದಲ್ಲಿ ಕಿಶೋರ್ ಶೆಟ್ಟಿಯನ್ನು ಬಂಧಿಸಲಾಗಿದೆ.

ಜೀ ಟಿವಿಯ ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ಟೆಲಿವಿಷನ್ ರಿಯಾಲಿಟಿ ಡ್ಯಾನ್ಸ್ ಸ್ಪರ್ಧೆಯ ಸೀಸನ್ 2 ರಲ್ಲಿ ಭಾಗವಹಿಸಿದ್ದ ಕಿಶೋರ್ ಶೆಟ್ಟಿ ಬಾಲಿವುಡ್ ಚಿತ್ರ ‘ಎಬಿಸಿಡಿ’ ಯಲ್ಲಿ ನಟಿಸಿದ್ದ.

ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕುಳಾಯಿ ನಿವಾಸಿ ಕಿಶೋರ್ ಅಮನ್ ಶೆಟ್ಟಿ (30) ಜೊತೆಗೆ, ಸುರತ್ಕಲ್ ನಿವಾಸಿ ಅಕೀಲ್ ನೌಶೀಲ್ (28) ಎಂಬ ವ್ಯಕ್ತಿಯನ್ನು ಎಂಡಿಎಂಎ (ಮೀಥಿಲೀನ್ ಡ್ರಾಕ್ಸಿ ಮೆಥಾಂಫೆಟಮೈನ್) ಹೊಂದಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

“ಸಿಸಿಬಿ ಪೊಲೀಸರು ಇಂದು ಬೆಳಿಗ್ಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಅವರು ಮುಂಬೈನಿಂದ ಡ್ರಗ್ಸ್ ಗಳನ್ನು ತಂದು ಅದನ್ನು ಮಂಗಳೂರಿನಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಆಯುಕ್ತರು ತಿಳಿಸಿದ್ದಾರೆ. ಒಟ್ಟು 1 ಲಕ್ಷ ಮೌಲ್ಯದ ಎಂಡಿಎಂಎ, ಬಜಾಜ್ ಡಿಸ್ಕವರ್ ಬೈಕ್, ಎರಡು ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಕೀಲ್ ಸೇಫ್ಟಿ ಆಫೀಸರ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ. ಅವನು ಕಳೆದ ವರ್ಷ ಇಲ್ಲಿಗೆ ಮರಳಿದ್ದ. ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಿಂದ ಡ್ರಗ್ಸ್ ಖರೀದಿಸಿ ಇಲ್ಲಿ ಮಾರಾಟ ಮಾಡುತ್ತಿದ್ದ. ಇನ್ನೊಬ್ಬ ಆರೋಪಿ ಕಿಶೋರ್ ಅಮನ್ ಶೆಟ್ಟಿ ಅವರು ಪ್ರಸಿದ್ಧ ಡ್ಯಾನ್ಸರ್ ಮತ್ತು ನೃತ್ಯ ಸಂಯೋಜಕರಾಗಿದ್ದಾರೆ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಇವರು ಸುವರ್ಣ ಕನ್ನಡ ಚಾನಲ್ ನ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದರು. ಇಬ್ಬರನ್ನೂ ಮಾದಕ ದ್ರವ್ಯ ಸೇವನೆ ಮತ್ತು ಬಳಕೆಗಾಗಿ ಬಂಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಶಿವಪ್ರಕಾಶ್, ಆರ್ ನಾಯಕ್, ಆರ್ಥಿಕ ಮಾದಕವಸ್ತು ತನಿಖಾಧಿಕಾರಿ ರಾಮಕೃಷ್ಣ, ಸಿಸಿಬಿ ಪಿಎಸ್‌ಐ ಕಬ್ಬಲ್‌ರಾಜ್ ಮತ್ತಿತರರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button