ಪ್ರಶ್ನಿಸುವ ಗುಣ ವೈಜ್ಞಾನಿಕ ಮನೋಭಾವದ ತಳಹದಿಯಾಗಿದೆ- ಪುರಂದರ ಭಟ್ ಕಾಯರ……
ಪುತ್ತೂರು: “ವಿದ್ಯಾರ್ಥಿಗಳು ಜೀವನದಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಂಡಾಗ ವೈಜ್ಞಾನಿಕ ಯೋಚನಾ ಸಾಮರ್ಥ್ಯ ವೃದ್ಧಿಯಾಗುವುದು. ಆ ಮೂಲಕ ನಮ್ಮನ್ನು ನಾವು ಬೆಳೆಸಲು ಸಾಧ್ಯ” ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕರಾದ ಶ್ರೀ ಪುರಂದರ ಭಟ್ ಕಾಯರ ಇವರು ನುಡಿದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಜ್ಞಾನ – ವಿಜ್ಞಾನ- ಗಣಿತ ಮೇಳದ ಉದ್ಘಾಟಕರಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾಭಾರತಿ ಕರ್ನಾಟಕದ ಕಾರ್ಯದರ್ಶಿಗಳಾದ ಶ್ರೀ ಲೋಕಯ್ಯ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಂತರ 2018-19ನೇ ಸಾಲಿನ ಹತ್ತನೇ ತರಗತಿಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಮ್ಮ ಮಾತೃ ಸಂಸ್ಥೆಯ ಕೀರ್ತಿಗೆ ಪಾತ್ರಳಾದ ಸರಳ ಸಜ್ಜನಿಕೆಯ ಪ್ರತಿಭಾವಂತ ವಿದ್ಯಾರ್ಥಿನಿ ಕು. ಸಿಂಚನಲಕ್ಷ್ಮೀಯನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಚ್ಯುತನಾಯಕ್‍ರವರು ಭಾರತೀಯ ವಿಜ್ಞಾನಿಗಳ ಸಾಧನೆಗಳ ಬಗ್ಗೆ ತಿಳಿಸುತ್ತಾ ಮಕ್ಕಳಲ್ಲಿ ಇಂತಹ ಮನೋಭಾವನೆ ಬೆಳೆಸಬೇಕು ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಸಿದಾಗ ಯಶಸ್ಸು ನಿಶ್ಚಿತ ಎಂದು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಶ್ರೀಯುತ ರವಿನಾರಾಯಣ್ ಹಿರಿಯರಾದ ಶಂಕರ್ ಭಟ್, ಶಾಲಾ ಮುಖ್ಯಗುರುಗಳು ಉಪಸ್ಥಿತರಿದ್ದರು. ಅಂತೆಯೇ ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಬಂದಂತಹ ವಿದ್ಯಾರ್ಥಿಗಳು, ಶಿಕ್ಷಕರು, ತೀರ್ಪುಗಾರರು ಉಪಸ್ಥಿತರಿದ್ದರು. ಸುಮಾರು 700 ಮಕ್ಕಳು 64 ವಿಧದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮೆಳದಲ್ಲಿ ಶಿಶುವರ್ಗ, ಬಾಲವರ್ಗ, ಕಿಶೋರವರ್ಗ ಮತ್ತು ತರುಣವರ್ಗದ ಮಕ್ಕಳು ಭಾಗವಹಿಸಿದ್ದರು. ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾಬೆಳ್ಳಾರೆ ಸ್ವಾಗತಿಸಿ ಸಹಶಿಕ್ಷಕಿ ಗೀತಾ.ಬಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.