ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ದೀಪಾವಳಿ ಆಚರಣೆ…

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ದೀಪಾವಳಿ ಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು.
ತನ್ನ ರೈಲು ಪಯಣದ ವೇಳೆ ಹೃದಯಾಘಾತದಿಂದ ಬಸವಳಿದ ಸಹಪ್ರಯಾಣಿಕನ ಜೀವವುಳಿಸಿದ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಪ್ರೊ .ಹೇಮಾವತಿಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರೈಲು ನಿಲ್ದಾಣದ ಅಂದಿನ ಘಟನೆಯನ್ನು ನೆನಪಿಸಿಕೊಂಡರು. ಅನಾರೋಗ್ಯಕ್ಕೊಳಗಾದ ವ್ಯಕ್ತಿಯ ರಕ್ಷಣೆಗೆ ಬರಲು ಯಾರೂ ತಯಾರಿರರಿಲ್ಲ. ಎಲ್ಲರೂ ಪ್ರಯಾಣದ ಧಾವಂತದಲ್ಲೇ ಇದ್ದರು. ಒಂದು ವೇಳೆ ನಮ್ಮ ಮನೆಯವರಿಗೆ ಈ ರೀತಿ ಆದರೆ ನಾವು ಮುಂದೆ ಸಾಗುತ್ತಿದ್ದೆವಾ ಎನ್ನುವ ಯೋಚನೆಯನ್ನು ಮಾಡಬೇಕು ಎಂದರು. ಈಗಿನ ಮೊಬೈಲ್ ಯುಗದಲ್ಲಿ ಪಕ್ಕದಲ್ಲಿಯೇ ಏನಾದರೂ ಘಟನೆ ನಡೆದರೆ ನಮಗೆ ಅರಿವಾಗುವುದಿಲ್ಲ. ಮನುಷ್ಯ ಎಲ್ಲವನ್ನೂ ಕಲಿತಿದ್ದಾನೆ ಆದರೆ ಮಾನವೀಯತೆಯನ್ನು ಮರೆತಿದ್ದಾನೆ. ವಿದ್ಯಾರ್ಥಿಗಳೆಲ್ಲರೂ ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡು ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ನುಡಿದರು.
ಕಾಲೇಜಿನ ಮುಂಭಾಗದ ತೆರೆದ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೀಪಾವಳಿಯ ಸಂದೇಶವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಸುಮಾರು 2000 ಕ್ಕೂ ಮಿಕ್ಕಿ ಹಣತೆಗಳನ್ನು ಉರಿಸಿ ಸಂಭ್ರಮಿಸಿದರು.
ಈ ಸಂಬಂಧ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ಡಾ.ಯಶೋಧಾ ರಾಮಚಂದ್ರ, ಸಂತೋಷ್ ಕುತ್ತಮೊಟ್ಟೆ, ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಹಸಂಸ್ಥೆಗಳ ಪ್ರಾಂಶುಪಾಲರುಗಳಾದ ಪ್ರೊ.ವಿ.ಜಿ.ಭಟ್, ಪ್ರೊ.ಮಹೇಶ್ ನಿಟಿಲಾಪುರ, ಪ್ರೊ.ಚಂದ್ರಕುಮಾರ್, ಪ್ರೊಎಚ್.ಕೆ.ಪ್ರಕಾಶ್, ಉಪನ್ಯಾಸಕರುಗಳಾದ ಪ್ರೊ.ಪ್ರಕಾಶ್ ಪೆಲ್ತಾಜೆ, ಪ್ರೊ.ಹರೀಶ್ ಶಾಸ್ತ್ರಿ, ವಿದ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಭಾವನಾ.ಎಂ.ಆರ್ ಸ್ವಾಗತಿಸಿ, ಸಿಬಿನ್ ರವೀಂದ್ರನ್ ವಂದಿಸಿದರು. ವರುಣ್ ರೈ ಮತ್ತು ಭಾವನಾ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Back to top button