ಅಕ್ರಮವಾಗಿ ಗೋವು ಕಳವು,ಹತ್ಯೆ – ಸೂಕ್ತ ತನಿಖೆಗೆ ಒತ್ತಾಯ…

ಬಂಟ್ವಾಳ: ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಗೋವುಗಳನ್ನು ಕಳವು ನಡೆಸಿ ಹತ್ಯೆ ಮಾಡುತ್ತಿರುವುದು ಅವ್ಯಾಹತವಾಗಿ ನಡೆಯುತ್ತಿರುವುದು ಖಂಡನೀಯ. ಈ ಬಗ್ಗೆ ತನಿಖೆ ನಡೆಸಿ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲು ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ ಅವರಿಗೆ ಮನವಿ ಮಾಡಲಾಯಿತು.
ಕಳೆದ ವಾರ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಕೂಟೇಲು ಎಂಬಲ್ಲಿ ಗೋ ಹತ್ಯೆ ಮಾಡಿ ಅದರ ತ್ಯಾಜ್ಯ ನದಿಗೆ ಎಸೆದಿದ್ದರು. ಬಳಿಕ ಅಮ್ಟಾಡಿ ಗ್ರಾಮದ ಲೋರೆಟ್ಟೋಪದವು ಎಂಬಲ್ಲಿ ಅನಧಿಕೃತ ಕಸಾಯಿಕಾನೆ ನಡೆಸುತ್ತಿರುವುದರ ಬಗ್ಗೆ ಪ್ರಕರಣ ದಾಖಲಾಗಿದೆ.
ಹಾಗಾಗಿ ಇದೇ ರೀತಿ ತಾಲೂಕಿನ ಅನೇಕ ಕಡೆಗಳಲ್ಲಿ ಗಮನಕ್ಕೆ ಬರದೆ ಅಕ್ರಮವಾಗಿ ದನಗಳನ್ನು ಹತ್ಯೆ ಮಾಡುತ್ತಿರುವ ಶಂಕೆ ವ್ಯಕ್ತಪಡಿಸಿದ್ದಾರೆ.ಗೋವುಗಳನ್ನು ಕದ್ದು ಹತ್ಯೆ ಮಾಡುವುದರಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಬಹುದು. ಅದಕ್ಕೆ ಅವಕಾಶ ಸಿಗದ ರೀತಿಯಲ್ಲಿ ಬಂಟ್ವಾಳ ಪೋಲೀಸರು ಕಾರ್ಯೋನ್ಮುಖರಾಗಬೇಕೆಂದು ಪೋಲೀಸರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಗೋರಕ್ಷ ಪ್ರಮುಖ್ ಸರಪಾಡಿ ಆಶೋಕ್ ಶೆಟ್ಟಿ , ಜಿಲ್ಲಾ ಸಹಸಂಚಾಲಕ ಭರತ್ ಕುಮ್ಡೇಲು, ಬಂಟ್ವಾಳ ಪ್ರಖಂಡ ಕಾರ್ಯದರ್ಶಿ ಸುರೇಶ್ ಬೆಂಜನಪದವು, ಭಜರಂಗದಳ ಬಂಟ್ವಾಳ ಸಂಚಾಲಕ ಶಿವಪ್ರಸಾದ್ ತುಂಬೆ, ಬಂಟ್ವಾಳ ಪ್ರಖಂಡ ಗೋರಕ್ಷಾ ಪ್ರಮುಖ್ ಅಭಿನ್ ರೈ, ಬಂಟ್ವಾಳ ಪ್ರಖಂಡ ಸಹ ಸಂಚಾಲಕ ಭುವಿತ್ ಶೆಟ್ಟಿ, ಬಂಟ್ವಾಳ ಪ್ರಖಂಡ ಸಹಸಂಚಾಲಕ ಸಂತೋಷ್ ಕುಲಾಲ್, ಆಕೇಶ್ ಬೆಂಜನಪದವು ಉಪಸ್ಥಿತರಿದ್ದರು.

Sponsors

Related Articles

Back to top button