ಸುದ್ದಿ

ಅಸಾಲ್ಪಾದಲ್ಲಿ ‘ಕಾರ್ನಿಕೊದ ಕೊರಗಜ್ಜೆ’ ಯಕ್ಷಗಾನ ತಾಳಮದ್ದಳೆ…

ಅಜಕಾರು ಬಳಗದ ಕಲಾ ಸೇವೆ ಅನುಪಮ- ದೇವು ಬಿ. ಪೂಜಾರಿ...

ಮುಂಬಯಿ : ‘ಕಳೆದ ಎರಡು ದಶಕಗಳಿಂದ ಅಜೆಕಾರು ಬಾಲಕೃಷ್ಣ ಶೆಟ್ಟರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗ ಮುಂಬೈ ನಗರದಲ್ಲಿ ನಿರಂತರ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆಗಳ ಮೂಲಕ ಮನೆ ಮಾತಾಗಿದೆ. ಪ್ರತಿ ವರ್ಷ ವಿವಿಧೆಡೆ ಸರಣಿ ಕಾರ್ಯಕ್ರಮಗಳನ್ನು ಏರ್ಪಡಿಸುವುದರೊಂದಿಗೆ ತಾಳಮದ್ದಳೆ ಪ್ರಕಾರಕ್ಕೆ ಹೊಸ ಆಯಾಮ ನೀಡಿ ಅಸಂಖ್ಯಾತ ಪ್ರೇಕ್ಷಕರು ಸೇರುವಂತೆ ಮಾಡಿರುವ ಅವರ ಕಲಾ ಸೇವೆ ಅನುಪಮವಾದುದು’ ಎಂದು ಅಸಾಲ್ಪ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿ ದೇವು ಬಿ.ಪೂಜಾರಿ ಹೇಳಿದ್ದಾರೆ.
ಅಜೆಕಾರು ಕಲಾಭಿಮಾನಿ ಬಳಗದ 21ನೇ ಸರಣಿ ತಾಳಮದ್ದಳೆಯ ಅಂಗವಾಗಿ ದೇವಸ್ಥಾನದಲ್ಲಿ ನಡೆದ ಯಕ್ಷಗಾನ ಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ಯಮಿ ಜಯರಾಮ ಶೆಟ್ಟಿ ಎಣ್ಣೆಹೊಳೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಡ್ವೋಕೇಟ್ ದಯಾನಂದ ಶೆಟ್ಟಿ, ಚಂದ್ರಹಾಸ ಶೆಟ್ಟಿ ಉಜಿರೆ,ಪ್ರಸಾದ್ ಶೆಟ್ಟಿ ಥಾಣೆ, ನಂದಳಿಕೆ ನಾರಾಯಣ ಶೆಟ್ಟಿ, ನಾರಾಯಣ ಬಂಗೇರ ಮತ್ತು ಜಗನ್ನಾಥ ಶೆಟ್ಟಿ ಸಾಣೂರು ಮುಖ್ಯ ಅತಿಥಿಗಳಾಗಿದ್ದರು.
ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಖ್ಯಾತ ಅರ್ಥಧಾರಿ, ಕರ್ನಾಟಕ ಯಕ್ಷಗಾನ, ಜಾನಪದ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

‘ಕಾರ್ನಿಕೊದ ಕೊರಗಜ್ಜೆ’ ತುಳು ತಾಳಮದ್ದಳೆ
ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಊರಿನ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ‘ಕಾರ್ನಿಕೊದ ಕೊರಗಜ್ಜೆ’ ವಿಶೇಷ ತುಳು ತಾಳಮದ್ದಳೆ ಜರಗಿತು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ , ದಿನೇಶ್ ಶೆಟ್ಟಿ ಕಾವಳಕಟ್ಟೆ, ಸದಾಶಿವ ಆಳ್ವ ತಲಪಾಡಿ, ಪ್ರಸಾದ್ ಸವಣೂರು ಅರ್ಥಧಾರಿಗಳಾಗಿದ್ದರು. ಭಾಗವತ ದೇವಿಪ್ರಸಾದ್ ಆಳ್ವ ತಲಪಾಡಿ, ದೇಲಂತ ಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ ಶೆಟ್ಟಿ ವಗೆನಾಡು ಹಿಮ್ಮೇಳದಲ್ಲಿ ಸಹಕರಿಸಿದರು.

Related Articles

Back to top button