ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ- ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ…
ಮೂಡುಬಿದ್ರಿ: ಇಲ್ಲಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಎರಡು ದಿನಗಳ ಕಾಲ ನಡೆಯುವ ಎರಡನೇ ಅಂತಾರಾಷ್ಟ್ರೀಯ ಸಮ್ಮೇಳನ ಫ್ರಂಟ್ಇಯರ್ಸ್ ಇನ್ ಇಂಜಿನಿಯರಿಂಗ್ ಸೈನ್ಸ್ ಆಂಡ್ ಟೆಕ್ನಾಲಜಿ ( ICFEST – 2022) ಇದರ ಉದ್ಘಾಟನಾ ಸಮಾರಂಭ ಮೇ.27 ರಂದು ನಡೆಯಿತು.
ಯೆನೆಪೋಯ ಸಮೂಹ ಸಂಸ್ಥೆಗಳ ಕಾರ್ಯಾಚರಣೆಗಳ ನಿರ್ದೇಶಕ ಯೆನೆಪೋಯ ಅಬ್ದುಲ್ಲ ಜಾವೇದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂತಹ ಸಮ್ಮೇಳನಗಳಿಂದ ಜ್ಞಾನದ ವಿನಿಮಯ ಸಾಧ್ಯವಾಗುತ್ತದೆ ಮಾತ್ರವಲ್ಲದೆ ಉದ್ಯಮ ಮತ್ತು ಶಿಕ್ಷಣದ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಎಂದರು. ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ಅವರು ಶುಭಹಾರೈಸಿದರು.
ಈಜಿಪ್ಟ್ ನ ಸೂಯೆಜ್ ಕೆನಾಲ್ ಯೂನಿವರ್ಸಿಟಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್, ಸೌದಿ ಅರೇಬಿಯಾ ಜೆದ್ದಾ ಇಲ್ಲಿಯ ಕಿಂಗ್ ಅಬ್ದುಲ್ ಅಝೀಜ್ ಯೂನಿವರ್ಸಿಟಿಯ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಪಿ ಎಚ್ ಡಿ ವಿಭಾಗದ ಗುಣಮಟ್ಟದ ಭರವಸೆ ಅಧಿಕಾರಿ ಡಾ. ನೇಯರ ರದ್ವಾನ್ ವಿಶೇಷ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ, “ಸಸ್ಟೇನಬಿಲಿಟಿ ಆಂಡ್ ಮುನ್ಸಿಪಲ್ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಸೊಲ್ಯೂಷನ್ಸ್ ಫಾರ್ ಡೆವಲಪಿಂಗ್ ಕಂಟ್ರೀಸ್ ” ಎಂಬ ವಿಷಯದಲ್ಲಿ ಮಾಹಿತಿ ನೀಡಿದರು.
ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ ಮತ್ತು ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್ ಉಪಸ್ಥಿತರಿದ್ದರು. ಸಮ್ಮೇಳನದ ಸಂಯೋಜಕ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಸತೀಶ ಅವರು ಸಮ್ಮೇಳನದ ವಿವರ ನೀಡಿ, ಮುಖ್ಯ ಭಾಷಣಕಾರರ ಪರಿಚಯ ಮಾಡಿದರು. ವಿದ್ಯಾರ್ಥಿ ಮಹಮ್ಮದ್ ಬಾಸಿತ್ ಪ್ರಾರ್ಥಿಸಿದರು. ಪ್ರಾಧ್ಯಾಪಕಿ ಪ್ರೊ. ವಾಣಿ ಸ್ವಾಗತಿಸಿದರು. ಪ್ರೊ. ಶಶಾಂಕ್ ಎಂ ಗೌಡ ವಂದಿಸಿದರು. ಪ್ರೊ ನಾಝಿಯಾ ಕಾರ್ಯಕ್ರಮ ನಿರ್ವಹಿಸಿದರು.
ಎರಡು ದಿನಗಳ ಕಾಲ ನಡೆಯುವ ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಇಂಜಿನಿಯರಿಂಗ್ ನ ವಿವಿಧ ವಿಭಾಗಗಳಲ್ಲಿ ನೂರಕ್ಕೂ ಅಧಿಕ ಪ್ರಬಂಧಗಳ ಪ್ರಸ್ತುತಿ ನಡೆಯಲಿದೆ.