ಮೌಲನಾ ಆಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ…
ಬಂಟ್ವಾಳ: ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖಾ ವತಿಯಿಂದ 2.35 ಕೋಟಿ ರೂ ವೆಚ್ಚ ದಲ್ಲಿ ಅರಳ ಗ್ರಾಮದ ಮುಲಾರಪಟ್ನ ಆಝಾದನಗರದಲ್ಲಿ ನಿರ್ಮಾಣ ವಾಗಲಿರುವ ಮೌಲನಾ ಆಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಇಂದು (ಮಂಗಳವಾರ) ಜರುಗಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದು, ಅಲ್ಪಸಂಖ್ಯಾತ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮುಲಾರಪಟ್ನದಲ್ಲಿ ನೂತನ ಕಟ್ಟಡ ನಿರ್ಮಾಣ ವಾಗಲಿದ್ದು ಮುಂದಿನ ಶಿಕ್ಷಣ ಅವಧಿಯಲ್ಲಿ ಆರಂಭಗೊಳ್ಳಲಿದೆ ಎಂದರು .
ಬಂಟ್ವಾಳ ಮಂಗಳೂರು ಸಂಪರ್ಕಿಸುವ ಮುಲಾರಪಟ್ನ ಸೇತುವೆ ಕುಸಿತದಿಂದ ಈ ಭಾಗದ ಜನರಿಗೆ ತೊಂದರೆಯಾಗಿದ್ದು, ಹೆಚ್ಚಿನ ಮುತುವರ್ಜಿ ವಹಿಸಿ ಅನುದಾನ ಬಿಡುಗಡೆ ಮಾಡಲಾಗಿದೆ.ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕಾಮಗಾರಿ ಆರಂಭಗೊಂಡಿದ್ದು, ಮುಂದಿನ ಮೇ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.
ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಮುಖ್ಯ ಅತಿಥಿ ಯಾಗಿದ್ದರು.ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ, ಜೆ.ಎಚ್.ಎಮ್ ಫೌಂಡೇಷನ್ ಅಧ್ಯಕ್ಷ ಹಂಝ, ನಿರ್ಮಿತಿ ಕೇಂದ್ರದ ಕಾರ್ಯಕಾರಿಣಿ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮಹಮ್ಮದ್, ಹಾಜಬ್ಬ, ಜುಮಾ ಮಸೀದಿ ಅಧ್ಯಕ್ಷ ಗುತ್ತಿಗೆದಾರ ಅಶ್ರಪ್
ಸ.ಹಿ.ಪ್ರಾಥಮಿಕ ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಸಮೀನಾ ಅಖ್ತರ್, ಉರ್ದು ಶಾಲಾ ಮತ್ತು ಮೌಲಾನಾ ಆಜಾದ್ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಅಲ್ಪ ಸಂಖ್ಯಾತ ಇಲಾಖಾ ಕಲ್ಯಾಣಾಧಿಕಾರಿ ಖಾದರ್ ಶಾ ಸ್ವಾಗತಿಸಿದರು.ಶಿಕ್ಷಕಿ ಕುಸುಮಾ ವಂದಿಸಿದರು.ಮೌಲನಾ ಅಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಮಹಮ್ಮದ್ ಹನೀಫ್ ಕಾರ್ಯಕ್ರಮ ನಿರೂಪಿಸಿದರು.