ಸುಳ್ಯ ವನಜ ರಂಗಮನೆ ಪ್ರಶಸ್ತಿ ಗೆ ಯಕ್ಷವಾಗ್ಮಿ ಜಬ್ಬಾರ್ ಸಮೊ ಸಂಪಾಜೆ ಆಯ್ಕೆ…

ಸುಳ್ಯ: ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ.) ಸುಳ್ಯ ಇದರ ಆಶ್ರಯದಲ್ಲಿ,ರಂಗನಿರ್ದೇಶಕ ಜೀವನ್ ರಾಂ ಸುಳ್ಯರ
ಮಾತೃಶ್ರೀ ಶ್ರೀಮತಿ ವನಜಾಕ್ಷಿ ಜಯರಾಮ ನೆನಪಿನಲ್ಲಿ ನೀಡುವ ‘ ವನಜ ರಂಗಮನೆ ಪ್ರಶಸ್ತಿ ‘ಗೆ ಈ ವರ್ಷ ಹಿರಿಯ ಯಕ್ಷಗಾನ ಅರ್ಥದಾರಿ ಜಬ್ಬರ್ ಸಮೊ ಅವರನ್ನು ಆಯ್ಕೆ ಮಾಡಲಾಗಿದೆ.
ಕಳೆದ 35 ವರ್ಷಗಳಿಂದ ನಿರಂತರವಾಗಿ ಯಕ್ಷಗಾನದ ಅರ್ಥದಾರಿಯಾಗಿ,ವೇಷದಾರಿಯಾಗಿ
ತನ್ನನ್ನು ತಾನು ತೊಡಗಿಸಿಕೊಂಡಿರುವ ಜಬ್ಬಾರ್ ಸಮೊ ಅವರು ರಾಜ್ಯ ಸರಕಾರದ ರೇಶ್ಮೆ ಇಲಾಖೆಯಲ್ಲಿ 28 ವರ್ಷ ಉದ್ಯೋಗಿಯಾಗಿದ್ದು ನಂತರ ಸ್ವ ಇಚ್ಛೆಯಿಂದ ನಿವೃತ್ತಿ ಪಡೆದವರು. ಕರಾವಳಿ ಕರ್ನಾಟಕದ ಯಕ್ಷಕೂಟಗಳಲ್ಲಿ ಬಹುಬೇಡಿಕೆಯ ಕಲಾವಿದನಾಗಿದ್ದು ತನ್ನ ಅದ್ಭುತ ವಾಕ್ಚಾತುರ್ಯದಿಂದ ಶುಕ್ರಾಚಾರ್ಯ,ವಾಲಿ,ಸುಗ್ರೀವ,ರಾವಣ,ಅಂಗದ, ಇಂದ್ರಜಿತು, ವೀರಮಣಿ,ಅರ್ಜುನ,ಕರ್ಣ,ಭೀಮ, ಕೌರವ,ಭೀಷ್ಮ..ಮುಂತಾದ ಪಾತ್ರಗಳಿಗೆ ಜೀವಭಾವ ತುಂಬಿದ ಅಪ್ಪಟ ಕಲಾವಿದರಾಗಿದ್ದಾರೆ.
ಕನ್ನಡ,ತುಳು,ಅರೆಭಾಷೆಯಲ್ಲೂ ಪಾತ್ರ ನಿರ್ವಹಿಸಿದ ಜಬ್ಬಾರರು ತನ್ನ ನಿರರ್ಗಳ ಮಾತು,ಸ್ಪಷ್ಟ ಭಾಷಾ ಪ್ರಸ್ತುತಿ,ಧ್ವನಿಯ ಸಮರ್ಥ ನಿರ್ವಹಣೆ,ಪಾತ್ರದೊಳಗಿನ ಭಾವ ತನ್ಮಯತೆ, ಚೌಕಟ್ಟು ಮೀರದ ಸಮಯಪ್ರಜ್ಞೆ ಮುಂತಾದವುಗಳ ಮೂಲಕ ದೇಶವಿದೇಶಗಳಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಆಗಸ್ತ್ 22 ರಂದು ಭಾನುವಾರ ರಂಗಮನೆಯಲ್ಲಿ ನಡೆಯುವ ಯಕ್ಷಸಂಭ್ರಮದಲ್ಲಿ ಜಬ್ಬಾರ್ ಸಮೊರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು,ಪ್ರಶಸ್ತಿಯು ಫಲಕ,ಸ್ಮರಣಿಕೆ ಹಾಗೂ ರೂ.10,000 ನಗದು ಒಳಗೊಂಡಿರುತ್ತದೆ.

Sponsors

Related Articles

Back to top button