ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ವಿಧಿವಶ…
ನವದೆಹಲಿ: ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್(82 ) ಅವರು ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಜೂ.25 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಅವರು ಬಳಲುತ್ತಿದ್ದರು. ಇಂದು ಬೆಳಿಗ್ಗೆ ಹೃದಯಸ್ತಂಭನದಿಂದ ಅವರು ಮೃತಪಟ್ಟಿದ್ದಾರೆ.
ರಾಜಸ್ಥಾನದ ಜೋಧ್ ಪುರ ಮೂಲದವರಾದ ಜಸ್ವಂತ್ ಸಿಂಗ್ ಅವರು, ಆರಂಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ರಾಜಕೀಯ ಆಕಾಂಕ್ಷೆಯಿಂದ ಸೇನೆಗೆ ನಿವೃತ್ತಿ ಘೋಷಿಸಿ ಸಕ್ರಿಯ ರಾಜಕೀಯಕ್ಕೆ ಸೇರ್ಪಡೆಯಾಗಿದ್ದರು.
ಜಸ್ವಂತ್ ಸಿಂಗ್ ಅವರು ಬಿಜೆಪಿ ಪಕ್ಷದಿಂದ ಐದು ಬಾರಿ ರಾಜ್ಯ ಸಭೆಗೆ ಆಯ್ಕೆಯಾಗಿದ್ದರು. ( 1980, 1986, 1998, 1999, 2004) ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. (1990, 1991,1996, 2009). ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲಿ ಅವರು ಪ್ರಮುಖ ಖಾತೆಗಳನ್ನು ನಿಭಾಯಿಸಿ, ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.