ಯಕ್ಷಗಾನದ ಸವ್ಯಸಾಚಿ,ಗುರು, ಭಾಗವತ ತೋನ್ಸೆ ಜಯಂತಕುಮಾರ್ ಅಸ್ತಂಗತ…
ಯಕ್ಷಗಾನ ಭಾಗವತರಾಗಿ, ಹಲವು ಯಕ್ಷಗಾನ ಸಂಘ ಮತ್ತು ಉಡುಪಿ ಯಕ್ಷಶಿಕ್ಷಣ ಟಸ್ಟ್ ನಲ್ಲಿ ಗುರುಗಳಾಗಿ ಸಾವಿರಾರು ಕಲಾವಿದರನ್ನು ಸಿದ್ಧಪಡಿಸಿದ ಯಕ್ಷವಾರಿಧಿ ತೋನ್ಸೆ ಜಯಂತ ಕುಮಾರ್ (77) ಇಂದು (26- 6- 23) ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಹಂಗಾರಕಟ್ಟೆ ಚೇತನಾ ಪ್ರೌಢ ಶಾಲೆಯ ಕಛೇರಿ ಅಧೀಕ್ಷಕರಾಗಿ ನಿವೃತ್ತರಾಗಿದ್ದ ಜಯಂತ ಕುಮಾರ್ ಅವರಿಗೆ ಯಕ್ಷಗಾನ ಪ್ರವೃತ್ತಿಯಾಗಿತ್ತು. ಸಂಚಾರಿ ಯಕ್ಷಗಾನ ಭಂಡಾರವೆಂದೇ ಖ್ಯಾತರಾಗಿದ್ದ ತೋನ್ಸೆ ಕಾಂತಪ್ಪ ಮಾಸ್ತರರ ಸುಪುತ್ರರಾಗಿದ್ದ ಇವರಿಗೆ ತಂದೆಯೇ ಯಕ್ಷಗಾನ ಗುರು. ಆರಂಭದಲ್ಲಿ ಯಕ್ಷಗಾನ ವೇಷಧಾರಿಯಾಗಿ ಆಮೇಲೆ ಯಕ್ಷಗಾನ ಗುರುಗಳಾಗಿ ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಬಡಗು ತಿಟ್ಟಿನಲ್ಲಿ ಯಕ್ಷಗಾನ ‘ಸವ್ಯಸಾಚಿ’ ಎಂದೇ ಖ್ಯಾತಿ ಗಳಿಸಿದ್ದ ಅವರಿಗೆ ಅದೇ ಹೆಸರಿನ ಅಭಿನಂದನ ಗ್ರಂಥ ಸಮರ್ಪಣೆಯಾಗಿದೆ.
ಉಡುಪಿ ಶಾಸಕರ ನೇತೃತ್ವದ ಯಕ್ಷಶಿಕ್ಷಣ ಟಸ್ಟ್ ನಲ್ಲಿ ಆರಂಭದಿಂದಲೂ ಗುರುಗಳಾಗಿ ಅದರ ಯಶಸ್ಸಿಗೆ ಕಾರಣರಾಗಿದ್ದರು. ತೋನ್ಸೆ ಜಯಂತ ಕುಮಾರ್ ಅವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀರಾಮ ವಿಠಲ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ಯಕ್ಷಾಂಗಣ ಮಂಗಳೂರು ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ – ಗೌರವಗಳು ಲಭಿಸಿವೆ.
ಇತ್ತೀಚೆಗೆ ಅನಾರೋಗ್ಯದಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಜಯಂತರು ಮತ್ತೆ ಚೇತರಿಸಿಕೊಳ್ಳಲಿಲ್ಲ. ಅವರು ಸಹೋದರ – ಬಹುಮುಖೀ ಕಲಾವಿದ ತೋನ್ಸೆ ಪುಷ್ಕಳ್ ಕುಮಾರ್, ಪತ್ನಿ, ಮೂವರು ಪುತ್ರರು, ಬಂಧು ಬಳಗ ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸೇರಿದಂತೆ ಹಲವಾರು ಗಣ್ಯರು ಮತ್ತು ಯಕ್ಷಗಾನ ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನಾಳೆ (ಜೂ.27) ಬೆಳಿಗ್ಗೆ 9.00 ಗಂಟೆಗೆ ಅವರ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವಿದೆ. 10.30ಕ್ಕೆ ಬೀಡಿನ ಗುಡ್ಡೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.