ಗೆಜ್ಜೆಗಿರಿ ನಂದನ ಬಿತ್ತಿಲ್ ರಸ್ತೆ ಅಗಲೀಕರಣ-ಮಠಂದೂರು….
ಪುತ್ತೂರು: ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನವಾದ ಗೆಜ್ಜೆಗಿರಿ ಕ್ಷೇತ್ರಕ್ಕೆ ಸಂಪರ್ಕಿಸುವ ಜಿಲ್ಲಾ ಪಂಚಾಯತ್ ರಸ್ತೆಯನ್ನು ಶೀಘ್ರವೇ ಅಗಲೀಕರಣಗೊಳಿಸಿ ಸುಲಭ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಅವರು ಶುಕ್ರವಾರ ಇಲ್ಲಿನ ಪಟ್ಟೆ – ಗೆಜ್ಜೆಗಿರಿ ಸಂಪರ್ಕ ರಸ್ತೆಯನ್ನು ಪರಿಶೀಲಿಸಿ ಬಳಿಕ ಕ್ಷೇತ್ರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಪಟ್ಟೆಯಿಂದ ಈಶ್ವರಮಂಗಲಕ್ಕೆ ತೆರಳುವ ರಸ್ತೆ ಇದಾಗಿದ್ದು, ಇದರಲ್ಲಿ 2 ಕಿ.ಮೀ. ಜಿಪಂ ರಸ್ತೆ ಮತ್ತು 1 ಕಿ.ಮೀ. ಕಚ್ಚಾ ಮಣ್ಣಿನ ರಸ್ತೆ ಗೆಜ್ಜೆಗಿರಿ ಪರ್ಕಿಸುತ್ತದೆ. ಮಣ್ಣಿನ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗುವುದು. ಜಿಪಂ ರಸ್ತೆಯಲ್ಲಿ ಬರುವ ಪಟ್ಟೆ ಅಪಾಯಕಾರಿ ತಿರುವನ್ನು ಅಗಲೀಕರಣ ಮಾಡಲಾಗುವುದು ಎಂದರು.
ಪಟ್ಟೆಯಿಂದ ಒಳರಸ್ತೆ ಕವಲೊಡೆಯುವ ಜಾಗದಲ್ಲೇ ಅಪಾಯಕಾರಿ ಸನ್ನಿವೇಶವಿದೆ. ಒಂದು ಭಾಗದಲ್ಲಿ ಹೊಳೆ ಹರಿಯುತ್ತಿದ್ದರೆ, ಮತ್ತೊಂದು ಭಾಗದಲ್ಲಿ ಕೆರೆ ಇದೆ. ಇವೆರಡರ ಮಧ್ಯೆ ಅಗಲ ಕಿರಿದಾದ ರಸ್ತೆ ಸಾಗುತ್ತಿದೆ. ಕೆರೆಯ ಮಾಲೀಕರು ತಾವೇ ಖುದ್ದಾಗಿ ತಡೆ ಬೇಲಿ ನಿರ್ಮಿಸಿದ್ದು, ಯಾವುದೇ ಅಪಾಯ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಇಲ್ಲಿ ರಸ್ತೆ ಅಗಲೀಕರಣ ಮಾಡಿ ತಡೆಗೋಡೆ ನಿರ್ಮಿಸುವ ಆವಶ್ಯಕತೆ ಇದೆ. ಇದನ್ನು ಹೇಗೆ ಮಾಡಬಹುದು ಎಂಬ ಬಗ್ಗೆ ಕೆಲವೇ ದಿನಗಳಲ್ಲಿ ಎಂಜಿನಿಯರ್ ಗಳ ತಂಡ ಬಂದು ಪರಿಶೀಲಿಸಲಿದೆ ಎಂದು ತಿಳಿಸಿದರು.
ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಗೆಜ್ಜೆಗಿರಿ ಸಂಪರ್ಕ ರಸ್ತೆಯ ಅಗಲೀಕರಣ ವಿಚಾರದಲ್ಲಿ ಉತ್ಸುಕತೆ ತೋರಿದ್ದಾರೆ. ವಿಶೇಷ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಸಚಿವರು ಮಂಜೂರು ಮಾಡುವ ಅನುದಾನ ಮತ್ತು ಶಾಸಕರ ಅನುದಾನ ಸೇರಿಸಿ ರಸ್ತೆ ಕಾಮಗಾರಿ ಮಾಡಿ, ಗೆಜ್ಜೆಗಿರಿ ಬ್ರಹ್ಮಕಲಶೋತ್ಸವಕ್ಕೆ ಮುನ್ನ ಲೋಕಾರ್ಪಣೆ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು. ಕೆರೆ ಮತ್ತು ರಸ್ತೆ ಪಕ್ಕದ ಜಮೀನಿನ ಮಾಲೀಕರಾದ ಶಿರಿಷ್ ಪಿ.ಬಿ. ಅವರು ಮಾತನಾಡಿ, ಸಾರ್ವಜನಿಕ ರಸ್ತೆ ಅಗಲ ಕಿರಿದಾಗಿರುವ ಕಾರಣ ಪಟ್ಟೆ ತಿರುವಿನಲ್ಲಿ ಅದನ್ನು ಅಗಲಗೊಳಿಸಲು ತಮ್ಮ ಜಮೀನಿನಲ್ಲಿ ಅಗತ್ಯ ಜಾಗವನ್ನು ಬಿಟ್ಟುಕೊಡುವುದಾಗಿ ತಿಳಿಸಿದರು. ಅದೇ ರೀತಿ ಭಾಗಷಃ ಕೆರೆಯನ್ನು ರಸ್ತೆಯಾಗಿ ಪರಿವರ್ತಿಸಿ ತಡೆಗೋಡೆ ನಿರ್ಮಿಸುವುದಾದಲ್ಲಿ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನವಾದ ಗೆಜ್ಜೆಗಿರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪುನರುತ್ಥಾನ ಕಾಮಗಾರಿಗಳನ್ನು ವೀಕ್ಷಿಸಿದ ಶಾಸಕರು ಮಾಹಿತಿ ಪಡೆದುಕೊಂಡರು. ಬಾಲಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್, ಕಾರ್ಯದರ್ಶಿ ಸುಧಾಕರ ಸುವರ್ಣ ತಿಂಗಳಾಡಿ, ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕ್ಷೇತ್ರದ ಆನುವಂಶಿಕರಾದ ಮಹಾಬಲ ಪೂಜಾರಿ, ತಾಲೂಕು ಸಮಿತಿ ಅಧ್ಯಕ್ಷ ಕೆಡೆಂಜಿಗುತ್ತು ಪ್ರವೀಣ್ ಕುಮಾರ್, ಕರಸೇವಾ ಸಮಿತಿಯ ಗೌರವಾಧ್ಯಕ್ಷ ಮಡ್ಯಂಗಳ ನಾರಾಯಣ ಪೂಜಾರಿ, ಪ್ರಮುಖರಾದ ನಿತೀಶ್ ಕುಮಾರ್ ಶಾಂತಿವನ, ಆರ್.ಸಿ. ನಾರಾಯಣ್ ರೆಂಜ, ನಾರಾಯಣ ಪೂಜಾರಿ ಕುರಿಕ್ಕಾರ, ಚಂದ್ರಕಾಂತ ಶಾಂತಿವನ ಮತ್ತಿತರರು ಉಪಸ್ಥಿತರಿದ್ದರು.