ಇರಾನಿ ಗ್ಯಾಂಗ್ ಸದಸ್ಯರಿಗೆ ನ್ಯಾಯಾಂಗ ಬಂಧನ…

ಬಂಟ್ವಾಳ:ಬಿಸಿರೋಡಿನ ಕೈಕಂಬದಲ್ಲಿ ಕ್ರೈಂ ಬ್ರ್ಯಾಂಚ್ ಪೋಲೀಸರೆಂದು ನಂಬಿಸಿ ವ್ಯಕ್ತಿಯೋರ್ವರ ಬಂಗಾರ ದೋಚಿದ ಹಳೆಯ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳಿಗೆ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಇರಾನಿ ಗ್ಯಾಂಗ್ ಸದಸ್ಯರಾದ ಮಹಾರಾಷ್ಟ್ರದ ಜಾಕೀರ್ ಹುಸೇನ್ (26) ಮತ್ತು ಕಂಬರ್ ರಹೀಂ ಮಿರ್ಜಾ (32)ಎಂಬವರು ಬಂಧನಕ್ಕೊಳಗಾದವರು.
2020 ರ ಜ.18 ರಂದು ಮಧ್ಯಾಹ್ನ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಮಿತ್ತಬೈಲು ಕೊಡಂಗೆ ನಿವಾಸಿ ಶಿವಪ್ರಸಾದ್ ಶರ್ಮ ಅವರು ಕೈಕಂಬದಲ್ಲಿ ನಡೆದುಕೊಂಡು ಹೋಗುವ ವೇಳೆ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳಿಬ್ಬರು ಹಿಂದಿ ಭಾಷೆಯಲ್ಲಿ ಮಾತನಾಡಿ, ನಾವು ಕ್ರೈಂ ಬ್ರಾಂಚ್ ಪೋಲೀಸ್ ಆಫೀಸರ್ ನಿಮ್ಮನ್ನು ಚೆಕ್ ಮಾಡಲು ಇದೆ ಎಂದು ಹೇಳಿ ನಂಬಿಸಿ, ಐಡೆಂಟಿಟಿ ಕೇಳಿದಾಗ ಆಶೋಕ್ ಕುಮಾರ್ ಕ್ರೈಂ ಬ್ರಾಂಚ್ ಎಂದು ಬರೆದಿರುವ ಕಾರ್ಡು ತೋರಿಸಿದ ಆರೋಪಿಗಳು ಇವರ ಬಳಿಯಲ್ಲಿದ್ದ ಬಂಗಾರವನ್ನು ಮತ್ತು ಹಣವನ್ನು ಕೇಳಿ ಪಡೆದುಕೊಂಡು ಇದನ್ನು ಕರವಸ್ತ್ರದಲ್ಲಿ ಕಟ್ಟಿಕೊಡುತ್ತೇವೆ, ಹೀಗೆ ತಿರುಗಾಡಬಾರದೆಂದು ಹೇಳಿದ್ದರು. ಬಳಿಕ ಕರವಸ್ತ್ರದಲ್ಲಿ ಕಟ್ಟಿಕೊಂಡ ಲಕ್ಷಾಂತರ ರೂ ಮೌಲ್ಯದ ಬಂಗಾರ ಮತ್ತು ಹಣವನ್ನು ಹಿಡಿದುಕೊಂಡು ಬೈಕಿನಲ್ಲಿ ಆರೋಪಿಗಳು ಪರಾರಿಯಾಗಿದ್ದರು.
ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಇದೇ ರೀತಿ ಕುಂದಾಪುರ ಮತ್ತು ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಪ್ರಕರಣದಲ್ಲಿ ಉಡುಪಿ ನಗರ ಪೋಲೀಸರು ಇರಾನಿ ಗ್ಯಾಂಗ್ ನ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬಂಟ್ವಾಳದ ಪ್ರಕರಣದ ಬಗ್ಗೆ ಬಾಯಿಬಿಟ್ಟಿದ್ದಾರೆ. ಬಳಿಕ ಹಿರಿಯಡ್ಕ ಕಾರಾಗೃಹದಲ್ಲಿದ್ದ ಆರೋಪಿಗಳನ್ನು ಇಲ್ಲಿನ ಪ್ರಕರಣದ ವಿಚಾರಣೆಗಾಗಿ ಬಂಟ್ವಾಳ ನಗರ ಠಾಣೆಗೆ ಕರೆತಂದಿದ್ದು, ಆರೋಪಿಗಳ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಮೇಲಾಧಿಕಾರಿಗಳ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಅಪರಾಧ ವಿಭಾಗದ ಎಸ್.ಐ. ಕಲೈಮಾರ್ ಪಿ. ಆರೋಪಿಗಳನ್ನು ಪೋಲೀಸ್ ಕಸ್ಟಡಿಗೆ ಪಡೆದು ತನಿಖೆಗೆ ಒಳಪಡಿಸಿರುತ್ತಾರೆ.

 

Sponsors

Related Articles

Leave a Reply

Your email address will not be published. Required fields are marked *

Back to top button