ಯಕ್ಷ ರಂಗಾಯಣದಿಂದ ‘ಪರಶುರಾಮ’ ರಂಗ ಪ್ರಯೋಗ ನಿರ್ಮಾಣಕ್ಕೆ ಸಚಿವರಿಂದ ಚಾಲನೆ…
ಕಾರ್ಕಳ: ಯಕ್ಷ ರಂಗಾಯಣ ಕಾರ್ಕಳ ಇದರ ಸಂಚಾರಿ ರಂಗ ತಂಡದ ನೂತನ ರಂಗ ಪ್ರಯೋಗ “ಪರಶುರಾಮ” ನಾಟಕ ತಯಾರಿಗೆ ಚಾಲನೆ ನೀಡಲಾಯಿತು.
ಕರ್ನಾಟಕ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನಿಲ್ ಕುಮಾರ್ ರವರು ಯಕ್ಷ ರಂಗಾಯಣದ ನಿರ್ದೇಶಕರಾದ ಜೀವನ್ ರಾಂ ಸುಳ್ಯರವರಿಗೆ ನಾಟಕದ ಪಠ್ಯವನ್ನು ಹಸ್ತಾಂತರಿಸುವ ಮೂಲಕ ನಾಟಕ ನಿರ್ಮಾಣಕ್ಕೆ ಚಾಲನೆ ನೀಡಿದರು. ವಿಶೇಷ ಕರ್ತವ್ಯಾಧಿಕಾರಿ ಶ್ರೀಮತಿ ಪೂರ್ಣಿಮಾ ಉಪಸ್ಥಿತರಿದ್ದರು.
ಯಕ್ಷ ರಂಗಾಯಣ ರೆಪರ್ಟರಿ
ಈಗಾಗಲೇ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ “ಚಿಣ್ಣರಮೇಳ” ಮತ್ತು ‘ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ- 1837’ ನಾಟಕ ಪ್ರದರ್ಶನಗಳ ಮೂಲಕ ರಾಜ್ಯಾಂದ್ಯಂತ ಸುದ್ದಿ ಮಾಡಿದ ಕಾರ್ಕಳದ ಯಕ್ಷರಂಗಾಯಣ ಇದೀಗ ತನ್ನ ಚೊಚ್ಚಲ ರೆಪರ್ಟರಿಯನ್ನು ಆರಂಭಿಸುತ್ತಿದೆ. ಮೂರು ತಿಂಗಳ ಅಲ್ಪ ಅವಧಿಯ ಈ ರೆಪರ್ಟರಿಯು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಹನ್ನೆರಡು ಜನ ಕಲಾವಿದರು ಹಾಗೂ ಮೂರು ಜನ ತಂತ್ರಜ್ಞರನ್ನು ಒಳಗೊಂಡಿರುತ್ತದೆ. ಪೂರ್ವಾಹ್ನ 7.00 ರಿಂದ ರಾತ್ರಿ 8.30 ರ ವರೆಗೆ ಕಲಾವಿದರ ದೈಹಿಕ ಮತ್ತು ಮಾನಸಿಕ ಸಿದ್ಧತೆಗೆ ಪೂರಕವಾದ ತರಗತಿಗಳ ಜೊತೆ ಜೊತೆಗೆ ಪರಶುರಾಮ ನಾಟಕದ ಸಿದ್ಧತೆಯು ನಡೆಯಲಿದೆ. ಯಕ್ಷಗಾನ ಹೆಜ್ಜೆ, ಜನಪದೀಯ ಅಂಶ, ಶೈಲೀಕೃತ ಅಭಿನಯ ಇತ್ಯಾದಿಗಳಿಂದ ಕಟ್ಟಲ್ಪಡುವ ಈ ನಾಟಕವನ್ನು ಖ್ಯಾತ ನಾಟಕಕಾರ ಶಶಿರಾಜ್ ರಾವ್ ಕಾವೂರು ರಚಿಸಿದ್ದು, ಜೀವನ್ ರಾಂ ಸುಳ್ಯ ನಿರ್ದೇಶಿಸಲಿದ್ದಾರೆ.
ಪ್ರತಿಮೆ ಲೋಕಾರ್ಪಣೆಗೆ ನಾಟಕ ಪ್ರದರ್ಶನ
ಡಿಸೆಂಬರ್ 19 ರಂದು ಕಾರ್ಕಳದ ಬೈಲೂರಿನಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಂ ಪಾರ್ಕ್ ಮತ್ತು ಪರಶುರಾಮನ 33 ಅಡಿ ಎತ್ತರದ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ಈ ನಾಟಕದ ಪ್ರಥಮ ಪ್ರದರ್ಶನ ನಡೆಯಲಿದ್ದು
ನಂತರ ರಾಜ್ಯಾಂದ್ಯಂತ ಪ್ರದರ್ಶಿಸಿಸುವ ಯೋಜನೆ ಯಕ್ಷ ರಂಗಾಯಣಕ್ಕಿದೆ ಎಂದು ನಿರ್ದೇಶಕರಾದ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.