ಸುದ್ದಿ

ಲಕ್ಷದ್ವೀಪ ನಿನ್ನೆ-ಇಂದು-ನಾಳೆ ಆತ್ಮಾವಲೋಕನ’ – ನಾಳೆ ಸುಳ್ಯದಲ್ಲಿ ವಿಚಾರಸಂಕಿರಣ…

ಸುಳ್ಯ:ಅರಂತೋಡಿನ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ‘ಲಕ್ಷದ್ವೀಪ ನಿನ್ನೆ- ಇಂದು- ನಾಳೆ ಆತ್ಮಾವಲೋಕನ’ ಜುಲೈ 11 ರಂದು ಪೂ.10ಕ್ಕೆ ಸುಳ್ಯದ ಉಡುಪಿ ಗಾರ್ಡನ್ ಹೋಟೆಲ್ ನಲ್ಲಿ ನಡೆಯಲಿದೆ ಎಂದು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಹಾಗು ಕೇಂದ್ರ ನಾರು ಮಂಡಳಿಯ ಮಾಜಿ ಸದಸ್ಯ ಟಿ.ಎಂ.ಶಹೀದ್ ಹೇಳಿದ್ದಾರೆ.
ಸುಳ್ಯ ಪ್ರಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಭಿವೃದ್ಧಿಯ ಹೆಸರಿನಲ್ಲಿ ಲಕ್ಷದ್ವೀಪದ ಮೂಲನಿವಾಸಿಗಳಾದ ಅಲ್ಪಸಂಖ್ಯಾತರಾದ ಮುಸ್ಲೀಂ ಕುಟುಂಬಗಳ ಮೇಲೆ ಕೇಂದ್ರ ಸರಕಾರ ದಬ್ಬಾಳಿಕೆ ಮಾಡುತ್ತಿದೆ. ಅಲ್ಲಿನ ಮುಗ್ಧ ಜನರನ್ನು ಒಕ್ಕಲೆಬ್ಬಿಸಿ ದ್ವೀಪವನ್ನು ಕಾರ್ಪೋರೆಟ್ ಗಳಿಗೆ ಗುತ್ತಿಗೆಗೆ ನೀಡುವ ಹುನ್ನಾರ ಇದರ ಹಿಂದೆ ಅಡಗಿದೆ ಎಂಬ ಸಂಶಯ ವ್ಯಕ್ತವಾಗುತ್ತಿದೆ ಎಂದು ಶಹೀದ್ ಆರೋಪಿಸಿದರು.
ಲಕ್ಷದ್ವೀಪ ಮತ್ತು ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಅತ್ಯಂತ ಮುಗ್ಧ ಮತ್ತು ಸುಸಂಸ್ಕೃತ ಜನರು ವಾಸಿಸುವ ಲಕ್ಷದ್ವೀಪದ ಮೇಲೆ ಕೇಂದ್ರ ಸರಕಾರ ನೇಮಿಸಿದ ಆಡಳಿತಾಧಿಕಾರಿಯ ಆಡಳಿತದಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲಿಯ ಶಾಲೆಯಲ್ಲಿ ಮಕ್ಕಳ ಆಹಾರದ ಬದಲಾವಣೆ ಮಾಡಿದ್ದಾರೆ, ಏರ್ ಆಂಬುಲೆನ್ಸನ್ನು ರದ್ದು ಮಾಡಿದ್ದು, ಜಿಲ್ಲಾ ಪಂಚಾಯತ್ ನ ಅಧಿಕಾರ ಕಸಿದಿರುವುದು ಸೇರಿದಂತೆ ಜನರಿಗೆ ಮಾರಕವಾಗುವಂತಹಾ ಹಲವು ಆಡಳಿತ ಬದಲಾವಣೆಯನ್ನು ತಂದಿದ್ದಾರೆ. ಈ ರೀತಿ ಕಾನೂನನ್ನು ತಂದು ಜನರ ಮೇಲೆ ಹೇರುವುದಕ್ಕೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರಕಾರ ಯಾವುದೋ ದುರುದ್ದೇಶದಿಂದ ಈ ರೀತಿಯ ಆಡಳಿತ ಬದಲಾವಣೆ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಈ ಕುರಿತು ವಿಚಾರ ವಿಮರ್ಶೆ ಮಾಡುವ ಉದ್ದೇಶದಿಂದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಟಿ.ಎಂ.ಶಹೀದ್ ಅಧ್ಯಕ್ಷತೆಯಲ್ಲಿ ನಡೆಯುವ ವಿಚಾರ ಸಂಕಿರಣದಲ್ಲಿ ಸಿಐಟಿಯು ಅಧ್ಯಕ್ಷ ಕೆ.ಪಿ.ಜಾನಿ, ಆಮ್ ಆದ್ಮಿ ಪಾರ್ಟಿ ಸಂಚಾಲಕ ಅಶೋಕ್ ಎಡಮಲೆ ಮುಖ್ಯ ಭಾಷಣಗಾರರಾಗಿ ಆಗಮಿಸಲಿದ್ದಾರೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಮುಖರಾದ ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ಎಂ.ವೆಂಕಪ್ಪ ಗೌಡ, ಸೋಮಶೇಖರ ಕೊಯಿಂಗಾಜೆ, ಕೆ.ಎಂ.ಮುಸ್ತಫ,ಸದಾನಂದ‌ ಮಾವಜಿ, ಆದಂ ಹಾಜಿ ಕಮ್ಮಾಡಿ, ಅಬ್ದುಲ್ ಮಜೀದ್, ಎಸ್.ಸಂಶುದ್ದೀನ್, ಜಿ.ಕೆ.ಹಮೀದ್ ಗೂನಡ್ಕ, ಇಕ್ಬಾಲ್ ಎಲಿಮಲೆ, ಅಬ್ದುಲ್ ಕಲಾಂ, ಇಬ್ರಾಹಿಂ ಖತ್ತರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಟಿ.ಎಂ.ಶಹೀದ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಎಂ.ಮುಸ್ತಫ, ಸದಾನಂದ ಮಾವಜಿ,ಆರ್.ಕೆ.ಮಹಮ್ಮದ್,ಅಬ್ದುಲ್ ಖಾದರ್ ಮೊಟ್ಟೆಂಗಾರ್ ಉಪಸ್ಥಿತರಿದ್ದರು.

Related Articles

Back to top button