ಗ್ರಾ.ಪಂ. ಸದಸ್ಯ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ರನ್ನು ತೆಗೆದು ಹಾಕುವ ಕರಡು ಅಧಿಸೂಚನೆ ವಾಪಾಸ್ ಪಡೆಯುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಮಂಜುನಾಥ ಭಂಡಾರಿ ಪತ್ರ…
ಮಂಗಳೂರು: ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯಿತಿ ರಾಜ್ (ಗ್ರಾಮ ಪಂಚಾಯಿತಿ ಅಧ್ಯಕ್ಷ\ಉಪಾಧ್ಯಕ್ಷ
ಮತ್ತು ಸದಸ್ಯರನ್ನು ತೆಗೆದು ಹಾಕುವ ಪ್ರಕ್ರಿಯೆ) ನಿಯಮಗಳಿಗೆ ಬದಲಾವಣೆಗಳನ್ನು ತರುವ ಉದ್ಧೇಶದಿಂದ ದಿನಾಂಕ 27.07.2022ರಂದು ಹೊರಡಿಸಿದ ಕರಡು ಅಧಿಸೂಚನೆ ವಾಪಾಸ್ ಪಡೆಯುವಂತೆ ಶಾಸಕರಾದ ಮಂಜುನಾಥ ಭಂಡಾರಿಯವರು ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಮುಖೇನ ಒತ್ತಾಯಿಸಿದ್ದಾರೆ.
ಸರ್ಕಾರದ ಅಧಿಸೂಚನೆ ಸಂಖ್ಯೆ RDPR /597 /GPA /2022 ದಿನಾಂಕ 27/07/2022 ಈ ಉಲ್ಲೇಖದ ಅಧಿಸೂಚನೆಯು ರಾಜ್ಯದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಚರು ಮತ್ತು ಸದಸ್ಯರನ್ನು ತೆಗೆದು ಹಾಕುವ ಕುರಿತಂತೆ ಸಲಹೆಗಳನ್ನು ಒಳಗೊಂಡಿರುತ್ತದೆ. ಈ ಸಲಹೆಗಳು ಕಾಯಿದೆಯಾಗಿ ಬದಲಾವಣೆಗೊಂಡು ಕಾರ್ಯಗತಗೊಂಡಲ್ಲಿ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಕಾಯಿದೆ ಬದ್ಧ ಹಕ್ಕನ್ನು ಮೊಟಕುಗೊಳಿಸುವ ಅಪಾಯ ಇರುವುದರಿಂದ ಅಧಿಸೂಚನೆಯನ್ನು ವಾಪಸ್ ಪಡೆಯುವಂತೆ ಸರಕಾರವನ್ನು ಒತ್ತಾಯಿಸುತ್ತಿದ್ದೇನೆ ಹಾಗೂ ಈ ಸಂದರ್ಭದಲ್ಲಿ ಕೆಳಗಿನ ಪ್ರಮುಖ ಅಂಶಗಳನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ.
ಕರಡು ಅಧಿಸೂಚನೆಯಲ್ಲಿ 12 ಎಲ್, 43 ಎ, 48(4), 48(5) ರಲ್ಲಿ ತಿಳಿಸಿರುವ ಅಂಶಗಳಿಗೆ ತಿದ್ದುಪಡಿ ತರುವ ಉದ್ಧೇಶವನ್ನು ತಿಳಿಸಲಾಗಿದೆ. ಅದರಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ತೆಗೆದು ಹಾಕುವ ಪ್ರಕ್ರಿಯೆಗೆ ಸಂಬಂಧಿಸಿ ದೂರು ದಾಖಲಿಸುವ ಮತ್ತು ತನಿಖೆ ನಡೆಸಿ ವರದಿ ನೀಡುವ ಅಧಿಕಾರವನ್ನು ರಾಜ್ಯ ಸರಕಾರದ ಹಂತದಿಂದ ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿಯ ಹಂತಕ್ಕೆ ಇಳಿಸಿರುವುದು ಸರಿಯಲ್ಲ. ಈ ಪ್ರಕ್ರಿಯೆ ಮೊದಲಿನಂತೆ ರಾಜ್ಯ ಸರಕಾರದ ಮಟ್ಟದಲ್ಲಿ ಮುಂದುವರಿಯಬೇಕು. ಈ ಪ್ರಕ್ರಿಯೆಯನ್ನು ಇನ್ನಷ್ಟು ನಿಷ್ಪಕ್ಷಪಾತವಾಗಿ ಬಳಸಲು ಅಗತ್ಯವಿರುವ ನಿಯಮಗಳನ್ನು ರೂಪಿಸಲು ಸರಕಾರ ಕ್ರಮ ವಹಿಸಬೇಕು.
ಕಾಯಿದೆಯ ಪ್ರಕರಣ 43 ಎ, 48(4) ಮತ್ತು 48(5) ರಲ್ಲಿ “ದುರ್ನಡತೆ ಮತ್ತು ತಲೆ ತಗ್ಗಿಸುವ ನಡತೆಯಿಂದ ತಪ್ಪಿತಸ್ಥ ನಾಗಿದ್ದಾನೆಂದು” ಎನ್ನುವ ಪದಗಳನ್ನು ಬಳಸಲಾಗಿದೆ. ಆದರೆ ಎಲ್ಲಿಯೂ ದುರ್ನಡತೆ ಮತ್ತು ತಲೆ ತಗ್ಗಿಸುವ ನಡತೆ ಯಾವುದೆಂದು ವಿವರಣೆ ನೀಡಿಲ್ಲ. ಕಾಯಿದೆಯ ಈ ಲೋಪವನ್ನು ಬಳಸಿಕೊಂಡು ಮತ್ತು ರಾಜಕೀಯ ಒತ್ತಡಕ್ಕೆ ಮಣಿದು ತಾಲೂಕು ಪಂಚಾಯಿತಿ ಕಿರಿಯ ಅಧಿಕಾರಿಗಳಾಗಿರುವ ” ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ” ಗಳು ಸಂದರ್ಭವನ್ನು ದುರ್ಬಳಕೆ ಮಾಡುವ ಸಾಧ್ಯತೆಗಳು ಇವೆ ಎಂದು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.
ಮೇಲಿನ ಹಂತಗಳ ಚುನಾಯಿತ ಪ್ರತಿನಿಧಿಗಳನ್ನು ಅವರ ಸದಸ್ಯ ಸ್ಥಾನ ಮತ್ತು ಹುದ್ದೆಯಿಂದ ತೆಗೆದು ಹಾಕಲು ಇಂತಹ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. ಪ್ರಸ್ತುತ ವಸತಿ ಸಭೆ, ವಾರ್ಡ್ ಸಭೆ, ಗ್ರಾಮ ಸಭೆ ಮಾತ್ರವಲ್ಲದೆ ಗ್ರಾಮ ಪಂಚಾಯಿತಿ ಜಮಾಬಂಧಿಯ ಮೂಲಕ ಮತದಾರರು ಮತ್ತು ಸಾರ್ವಜನಿಕರಿಗೆ ಉತ್ತರಧಾಯಿತ್ವ ಹೊಂದಿರುವ ಗ್ರಾಮ ಪಂಚಾಯಿತಿ ಸದಸ್ಯರನ್ನು ಮೇಲಿನ ಹಂತಗಳ ಚುನಾಯಿತ ಪ್ರತಿನಿಧಿಗಳ ರೀತಿಯಲ್ಲೇ ಗೌರವದಿಂದ ನೋಡುವುದು ಸರಕಾರದ ಜವಾಬ್ಧಾರಿಯಾಗಿದೆ. ಹೀಗಾಗಿ ಮೇಲಿನ ಉಲ್ಲೇಖದ ಕರಡು ಅಧಿಸೂಚನೆಯನ್ನು ವಾಪಸ್ಸು ಪಡೆಯುವಂತೆ ಆದೇಶಿಸಬೇಕಾಗಿ ವಿನಂತಿಸುತ್ತೇನೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯಿತಿ ರಾಜ್ ಕಾಯಿದೆಯ ಪ್ರಕರಣ 310 -ಎ ಪ್ರಕಾರ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಪಂಚಾಯಿತಿ ಪರಿಷತ್ ಹೆಸರಿನ ಉನ್ನತ ಮಟ್ಟದ ಸಮಿತಿ ರಚನೆಯಾಗಿದೆ. ಈ ಸಮಿತಿಯು ಮೂರೂ ಹಂತಗಳ ಪಂಚಾಯಿತಿ ರಾಜ್ ಸಂಸ್ಥೆಗಳ ಪ್ರಾತಿನಿಧಿಕ ವ್ಯವಸ್ಥೆಯಾಗಿರುತ್ತದೆ. ಕಾಯಿದೆಗೆ ಸಂಬಂಧಿಸಿದ ಯಾವುದೇ ಬದಲಾವಣೆಗಳು, ತಿದ್ದುಪಡಿಗಳು ಈ ಸಮಿತಿಯ ಮುಂದೆ ಚರ್ಚೆಯಾಗಿ ಒಪ್ಪಿಗೆಯಾದ ನಂತರವೇ ಕಾಯಿದೆಯ ರೂಪ ಪಡೆಯಬೇಕು ಎನ್ನುವುದು ಈ ವ್ಯವಸ್ಥೆಯನ್ನು ರೂಪಿಸಿರುವ ಉದ್ಧೇಶವಾಗಿದೆ. ನಿಮ್ಮ ಆಡಳಿತ ಅವಧಿಯಲ್ಲಾದರೂ ರಾಜ್ಯ ಪಂಚಾಯಿತಿ ಪರಿಷತ್ ಕಾಯಿದೆಯ ಉದ್ಧೇಶಕ್ಕೆ ಅನುಗುಣವಾಗಿ ಕಾರ್ಯಪ್ರವೃತ್ತವಾಗಲಿ ಎಂದು ಆಶಿಸುತ್ತೇನೆ.
ಸ್ಥಳೀಯಾಡಳಿತ ಸಂಸ್ಥೆಗಳನ್ನು ವಿಧಾನ ಪರಿಷತನಲ್ಲಿ ಪ್ರತಿನಿಧಿಸುವ ಒಬ್ಬ ಜವಾಬ್ಧಾರಿಯುತ ಶಾಸಕನಾಗಿ ನನ್ನ ಕಾಳಜಿಯನ್ನು ಈ ಪತ್ರದ ಮೂಲಕ ವ್ಯಕ್ತಪಡಿಸಿದ್ದೇನೆ. ತಾವು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಅಧಿಕಾರ ವಿಕೇಂದ್ರೀಕರಣದ ಆಶಯಗಳನ್ನು ಸಂರಕ್ಷಿಸುತ್ತೀರಿ ಎಂದು ನಂಬಿದ್ದೇನೆ ಎಂದು ಶಾಸಕರಾದ ಮಂಜುನಾಥ ಭಂಡಾರಿಯವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.